ಗುರುದಾಸ್‌ಪುರ್: ಪಠಾಣ್‌ಕೋಟ್ ಉಗ್ರ ದಾಳಿಗೆ ಮುನ್ನ ಉಗ್ರರು ನನ್ನನ್ನು ಅಪಹರಣಗೈಯ್ಯಲು ಯತ್ನಿಸಿದರು, ಅಲ್ಲಿಂದ ನಾನು ಪಾರಾಗಿ ಬಂದೆ ಎಂದು ಹೇಳುತ್ತಿರುವ ಗುರುದಾಸ್‌ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ವಿರುದ್ಧ ಈಗ ಲೈಂಗಿಕ ಆರೋಪ ಕೂಡಾ ಕೇಳಿ ಬರುತ್ತಿದೆ. ಗುರುದಾಸ್‌ಪುರ್ ಠಾಣೆಯ 5 ಮಹಿಳಾ ಕಾನ್‌ಸ್ಟೇಬಲ್‌ಗಳು ಸಿಂಗ್ ವಿರುದ್ಧ ಡಿಜಿಪಿಗೆ ದೂರು ನೀಡಿದ್ದಾರೆ.
ನಮ್ಮೊಂದಿಗೆ ಎಸ್ಪಿ ಸಿಂಗ್ ಅನುಚಿತವಾಗಿ ವರ್ತಿಸಿದ್ದು ಮಾತ್ರವಲ್ಲ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಪೊಲೀಸರು ದೂರು ಸಲ್ಲಿಸಿದ್ದಾರೆ.
ತನ್ನನ್ನು ಅಪಹರಣಗೈಯ್ಯಲು ಯತ್ನಿಸಿದ ನಂತರವೇ ಉಗ್ರರು ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ್ದಾರೆ ಎಂದು ಸಲ್ವಿಂದರ್ ಸಿಂಗ್ ಹೇಳುತ್ತಿದ್ದಾರೆ. ಆದರೆ ಆ ವೇಳೆ ಸಲ್ವಿಂದರ್ ಜತೆಗಿದ್ದ ಜ್ಯುವೆಲ್ಲರಿ ಮಾಲೀಕ ಮತ್ತು ಬಾಣಸಿಗ ಹೇಳುವ ಮಾತಿನಲ್ಲಿ ವೈರುಧ್ಯವಿರುವುದರಿಂದ ಸಿಂಗ್ ಹೇಳಿದ್ದು ನಿಜವೋ ಸುಳ್ಳೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.