ಪುಣೆ: ವಿದ್ಯಾರ್ಥಿಗಳ ಭಾರಿ ಪ್ರತಿಭಟನೆಯ ನಡುವೆಯೇ ಟಿವಿ ನಟ, ಬಿಜೆಪಿ ಸದಸ್ಯ ಗಜೇಂದ್ರ ಚೌಹಾಣ್ ಅವರು ಶುಕ್ರವಾರ ಫಿಲಂ ಆ್ಯಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್ ಟಿಐಐ)ದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ನೇಮಕಗೊಂಡ(ಜೂ.9) 7 ತಿಂಗಳ ಬಳಿಕ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇದೊಂದು ರಾಜಕೀಯ ನೇಮಕ ಎಂದು ಆಕ್ರೋಶಿಸಿ ಪ್ರತಿಭಟನೆ ನಡೆಸುತ್ತಿದ್ದ 40 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಳಗ್ಗೆಯೇ ಸಂಸ್ಥೆಯ ಪ್ರಮುಖ ದ್ವಾರದಲ್ಲಿ ವಿದ್ಯಾರ್ಥಿಗಳು ಡೋಲು ಬಾರಿಸುತ್ತಾ, ``ಗಜೇಂದ್ರ ಚೌಹಾಣ್ ಗೋ ಬ್ಯಾಕ್'' ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ಚೌಹಾಣ್ ಅವರು ಸಂಸ್ಥೆಯ ಆವರಣದಲ್ಲಿರುವ ತಮ್ಮ ಹೋಟೆಲ್ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಇದೇ ವೇಳೆ, ವಿದ್ಯಾರ್ಥಿಗಳ ಪ್ರತಿಭಟನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಚೌಹಾಣ್, ``ನಾನು ಬಂದಿದ್ದು ಕೆಲಸ ಮಾಡಲು. ನನಗೊಂದು ಅಜೆಂಡಾ ಇದೆ. ನನ್ನ ಕೆಲಸವನ್ನು ನಾನು ಮಾಡುತ್ತೇನೆ'' ಎಂದಿದ್ದಾರೆ. ಜತೆಗೆ, ವಿದ್ಯಾರ್ಥಿಗಳು ನನ್ನನ್ನು ಭೇಟಿ ಯಾಗಿ ಕೇಳಿಕೊಂಡರೆ, ಪ್ರತಿಭಟನೆಯ ವೇಳೆ ಅವರ ವಿರುದ್ಧ ದಾಖಲಾಗಿರುವ ಕೇಸು ಹಿಂಪಡೆಯುವ ಬಗ್ಗೆ ನಿರ್ಧರಿಸುತ್ತೇನೆ ಎಂದೂ ಹೇಳಿದ್ದಾರೆ.
ಚೌಹಾಣ್ ಅವರು ಅಧಿಕಾರ ಸ್ವೀಕರಿಸಲೆಂದು ಎಫ್ ಟಿಐಐಗೆ ಆಗಮಿಸಿದಾಗ, ಪೊಲೀಸರು ಒತ್ತಾಯಪೂರ್ವಕವಾಗಿ ವಿದ್ಯಾರ್ಥಿಗಳನ್ನು ವ್ಯಾನ್‍ನೊಳಕ್ಕೆ ತಳ್ಳಿದರು. ಈ ವೇಳೆ ವಿದ್ಯಾರ್ಥಿಗಳು ಪೊಲೀಸರ ನಡುವೆ ಭಾರಿ ವಾಗ್ವಾದ ನಡೆಯಿತು. ಇದೇ ವೇಳೆ, ನಿರ್ಮಾಪಕ ನಿರ್ದೇಶಕ ಬಿ ಪಿ ಸಿಂಗ್‍ರನ್ನು ಎಫ್ ಸಿಐಐ ಉಪಾಧ್ಯಕ್ಷರಾಗಿ ಹಾಗೂ ಅಕಾಡೆಮಿಕ್ ಕೌನ್ಸಿಲ್ ಮುಖ್ಯಸ್ಥರ ನ್ನಾಗಿ ನೇಮಕ ಮಾಡಲಾಗಿದೆ. ಚೌಹಾಣ್ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ವಿದ್ಯಾರ್ಥಿಗಳ ವಾಗ್ವಾದ.