ದೇಶ

ಗುರುದಾಸ್‌ಪುರ್ ಎಸ್ಪಿಗೆ ಸುಳ್ಳುಪತ್ತೆ ಪರೀಕ್ಷೆ ಸಾಧ್ಯತೆ?

Rashmi Kasaragodu
ಪಠಾಣ್ ಕೋಟ್: ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ದಾಳಿ ನಡೆಸಿದ ಉಗ್ರರಿಗೆ ಭಾರತದಿಂದಲೇ ಸಹಾಯ ಲಭಿಸಿದೆ ಎಂದು ಹೇಳಲಾಗುತ್ತಿದೆ. ಈ ಸಂದೇಹದಿಂದ ವಾಯು ನೆಲೆಯ ಇಂಜಿನಿಯರಿಂಗ್ ವಿಭಾಗದ ನೌಕರರನ್ನು ವಿಚಾರಣೆಗೊಳಪಡಿಸಲಾಗಿದೆ. ಅದೇ ವೇಳೆ ಗುರುದಾಸ್‌ಪುರ್‌ದ ಎಸ್ಪಿ ಸಲ್ವಿಂದರ್ ಸಿಂಗ್ ಹೇಳಿಕೆಯಲ್ಲಿ ವೈರುಧ್ಯವಿರುವುದರಿಂದ ತನಿಖಾ ತಂಡ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ.
ಕಳೆದ ವಾರ ಪಠಾಣ್ ಕೋಟ್ ದಾಳಿಗೆ ಮುನ್ನ ಪಾಕ್‌ಉಗ್ರರು ತನ್ನನ್ನು ಅಪಹರಣ ಮಾಡಲು ಯತ್ನಿಸಿದ್ದರು ಎಂದು ಸಲ್ವಿಂದರ್ ಹೇಳಿದ್ದರು. ತಾನು ಪಠಾಣ್‌ಕೋಟ್‌ನಲ್ಲಿರುವ ದೇವಾಲಯವೊಂದರ ನಿತ್ಯ ಸಂದರ್ಶಕನಾಗಿದ್ದು, ಅಲ್ಲಿಗೆ ಹೋಗಿ ಬರುವ ವೇಳೆ ಅಪಹರಣ ಯತ್ನ ನಡೆದಿತ್ತು ಎಂದು ಸಿಂಗ್ ಹೇಳಿದ್ದರು. ಆದರೆ ತಾವು ಸಲ್ವಿಂದರ್ ಅವರನ್ನು ಡಿಸೆಂಬರ್ 31ಕ್ಕೆ ಮೊದಲ ಬಾರಿ ನೋಡಿದ್ದು ಎಂದು ಆ ದೇಗುಲದ ಉಸ್ತುವಾರಿ ವಹಿಸಿದ್ದ ಸೋಮರಾಜ್ ಎಂಬವರು ಹೇಳಿದ್ದಾರೆ.
ಆದಾಗ್ಯೂ, ತಾಲೂರು ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ವಾಪಸ್ ಬರಬೇಕಾದರೆ ಸಲ್ವಿಂದರ್ ತೆಗೆದುಕೊಂಡ ಅವಧಿ ಬಗ್ಗೆ ಸಂದೇಹವಿದೆ. ಅಷ್ಟೇ ಅಲ್ಲದೆ ಈ ಘಟನೆಯ ವೇಳೆ ಆತನ ಜತೆಗಿದ್ದ ಜ್ಯುವೆಲ್ಲರಿ ಮಾಲೀಕ ಮತ್ತು ಬಾಣಸಿಗ ಹೇಳುವ ಹೇಳಿಕೆಯಲ್ಲೂ ವ್ಯತ್ಯಾಸವಿದೆ.
ಆದ್ದರಿಂದ ಸಲ್ವಿಂದರ್‌ನ್ನು ಸುಳ್ಳುಪತ್ತೆ ಪರೀಕ್ಷೆಗೊಳಪಡಿಸಲಾಗುವುದು. ದೆಹಲಿ ಅಥವಾ ಬೆಂಗಳೂರಿನಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ಎನ್‌ಎಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
SCROLL FOR NEXT