ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳ ಕಾಲ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರುವ ಸಾಧ್ಯತೆ ಇದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ, ತಮ್ಮ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸಾವಿನ ಆಘಾತದಿಂದ ಮೆಹಬೂಬಾ ಮುಫ್ತಿ ಅವರು ಇನ್ನು ಹೊರ ಬಂದಿಲ್ಲ. ಹೀಗಾಗಿ ಅವರು ತಕ್ಷಣಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಈ ಸಂಬಂಧ ಅವರ ಆಪ್ತರು ಮೆಹಬೂಬಾ ಮುಫ್ತಿ ಅವರನ್ನು ಶ್ರೀನಗರದ ನಿವಾಸದಲ್ಲಿ ಭೇಟಿ ಮಾಡಿ, ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ತಂದೆಯ ಸಾವಿನಿಂದ ರಾಜ್ಯದಲ್ಲಿ ನಾಲ್ಕು ದಿನ ಶೋಕಾಚರಣೆ ಘೋಷಿಸಲಾಗಿದ್ದು, ಶೋಕಾಚರಣೆ ಅವಧಿ ಮುಗಿಯುವವರೆಗೆ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಪಿಡಿಪಿ ನಾಯಕರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಾಲ್ಕು ದಿನಗಳ ಶೋಕಾಚರಣೆ ಭಾನುವಾರ ಅಂತ್ಯವಾಗಲಿದ್ದು, ಕೆಲವು ದಿನಗಳ ಕಾಲ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೊಳಿಸುವುದಕ್ಕೆ ಒಪ್ಪಿಗೆ ಸೂಚಿಸಿರುವುದಾಗಿ ಪಿಡಿಪಿ ಹಿರಿಯ ನಾಯಕ ಹಾಗೂ ಸಂಸದ ಮುಜಾಫರ್ ಹುಸೇನ್ ಬೇಗ್ ಅವರು ತಿಳಿಸಿದ್ದಾರೆ.