ಕೊಲ್ಕತ್ತಾ: ವಾರಗಳ ಹಿಂದೆ ಹಿಂಸಾಚಾರ ನಡೆದಿದ್ದ ಕೋಲ್ಕತ್ತಾದ ಮಾಲ್ಡಾ ಜಿಲ್ಲೆಗೆ ಬಿಜೆಪಿಯ ಮೂವರ ನಿಯೋಗ ಸೋಮವಾರ ಭೇಟಿ ನೀಡಿತ್ತು. ಆದರೆ ಮಾಲ್ಡಾದಲ್ಲಿ ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಅನುಮತಿ ಪಡೆಯದೆಯೇ ಭೇಟಿ ನೀಡಿದ ನಿಯೋಗವನ್ನು ಬಂಧಿಸಿ ಆಮೇಲೆ ಬಿಡುಗಡೆಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಮಮತಾ ಅವರಿಗೆ ಪಂಚ ಪ್ರಶ್ನೆಯನ್ನು ಕೇಳಿದೆ.
ಹಿಂಸಾಚಾರವನ್ನು ನಿಯಂತ್ರಿಸುವುದರಲ್ಲಿ ಮಮತಾ ವಿಫಲವಾಗಿದ್ದಾರೆ. ಓಪಿಯಂ ಕೃಷಿ ಮತ್ತು ನಕಲಿ ನೋಟಿನ ದಂಧೆ ಬಗ್ಗೆ ಕಾಲಿಯಾಚಾಕ್‌ನಲ್ಲಿ ದಾಖಲಾಗಿದ್ದ ಪ್ರಕರಣಗಳ ದಾಖಲೆಗಳನ್ನು ನಾಶ ಮಾಡುವುದಕ್ಕೋಸ್ಕರ ಪ್ರತಿಭಟನಾಕಾರರು ಕಾಲಿಯಾಚಾಕ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಆರೋಪಿಸಿದ್ದಾರೆ.
ಬಿಜೆಪಿ ಸಂಸದರಾದ ಎಸ್‌ಎಸ್ ಅಹ್ಲುವಾಲಿಯಾ, ಬಿ ಡಿ ರಾಮ್ ಮತ್ತು ಭುಪೇಂದರ್ ಯಾದವ್ ಅವರ ನಿಯೋಗವು ಮಾಲ್ಡಾಗೆ ಭೇಟಿ ನೀಡಿತ್ತು. ಇದೇ ನಿಯೋಗ ದೆಹಲಿಗೆ ಬಂದು ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಸಿದ್ಧಾರ್ಥ್ ಅವರು ಹೇಳಿದ್ದಾರೆ.
ಅದೇ ವೇಳೆ ಬಿಜೆಪಿ ಮಮತಾ ಬ್ಯಾನರ್ಜಿ ಅವರಲ್ಲಿ 5 ಪ್ರಶ್ನೆಗಳನ್ನು ಕೇಳಿದೆ. ಆ ಪ್ರಶ್ನೆಗಳು ಇಂತಿವೆ
1. ಜನವರಿ 3 ನೇ ತಾರೀಖಿಗೆ ಮಾಲ್ಡಾದಲ್ಲಿ ಹಿಂಸಾಚಾರ ನಡೆದಿತ್ತು. ಇಲ್ಲಿ ಕೋಮು ವೈಷಮ್ಯ ಸೃಷ್ಟಿಸುವ ಸಲುವಾಗಿಯೇ ಕರಪತ್ರಗಳನ್ನು ಸಾರ್ವಜನಿಕವಾಗಿ ಹಂಚಲಾಗಿತ್ತು. ಇಷ್ಟೆಲ್ಲವೂ ಮುಕ್ತವಾಗಿ ನಡೆದಿದ್ದರೂ ಹಿಂಸಾಚಾರ ತಡೆಗಟ್ಟಲು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವನ್ನು ಯಾಕೆ ಕೈಗೊಂಡಿಲ್ಲ?
2. ಒಂದು ತಿಂಗಳ ಹಿಂದೆ ಪ್ರವಾದಿ ಮುಹಮ್ಮದ್‌ನ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿರುವುದೇ ಮಾಲ್ಡಾ ಹಿಂಸಾಚಾರಕ್ಕೆ ಕಾರಣ ಎಂದು ಮಮತಾ ಅವರ ಸರ್ಕಾರ ಹೇಳುತ್ತಿದೆ. ಆದರೆ ಅವಹೇಳನಾಕಾರಿ ಹೇಳಿಕೆಗೆ ಪ್ರತಿಭಟಿಸಲು ಒಂದು ತಿಂಗಳ ಅವಧಿ ಯಾಕೆ ಬೇಕಿತ್ತು? ಇದು ಪ್ರತಿಭಟನೆಯಲ್ಲ, ಪೂರ್ವ ನಿಯೋಜಿತ ಕೃತ್ಯ
3. ಸ್ಥಳೀಯರು ಮತ್ತು ಬಿಎಸ್‌ಎಫ್ ನಡುವೆ ನಡೆದ ಸಂಘರ್ಷ ಅದು ಎಂದು ಮಮತಾ ಹೇಳುತ್ತಿದ್ದಾರೆ. ಅಷ್ಟೇ ಆಗಿದ್ದರೆ ಜನರ ಗುಂಪು ಬಿಎಸ್‌ಎಫ್ ಪೋಸ್ಟ್ ಗಳ ಮೇಲೆ ದಾಳಿ ಮಾಡುವ ಬದಲು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದು ಯಾಕೆ ?
4. ರಾಷ್ಟ್ರೀಯ ತನಿಖಾ ದಳ ಮಾಲ್ಡಾದಲ್ಲಿನ ನಕಲಿ ನೋಟು ದಂಧೆಯ ಬಗ್ಗೆ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸುಮಾರು 50ಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ದಾಖಲೆಗಳು ಕಾಲಿಯಾಚಾಕ್ ಪೊಲೀಸ್ ಠಾಣೆಯಲ್ಲಿದೆ ಎಂಬುದಕ್ಕೂ ಸಾಕ್ಷಿಗಳಿವೆ. ಆ ದಾಖಲೆಗಳನ್ನು ನಾಶ ಮಾಡುವುದಕ್ಕೋಸ್ಕರವೇ ಠಾಣೆಗೆ ಬೆಂಕಿ ಹಚ್ಚಲಾಯಿತು.
5. ಇಷ್ಟೇ ಅಲ್ಲ, ಮಾಲ್ಡಾದಲ್ಲಿ ವ್ಯಾಪಕವಾಗಿ ಓಪಿಯಂ ಕೃಷಿ ನಡೆಯುತ್ತಿದೆ. ಇದರ ಬಗ್ಗೆ ರಾಜ್ಯ ಸರ್ಕಾರಕ್ಕಾಗಲೀ, ಪೊಲೀಸರಿಗಾಗಿ ಮಾಹಿತಿ ಇಲ್ಲವೇ? ಪಶ್ಚಿಮ ಬಂಗಾಳ ಸರ್ಕಾರ ನಿದ್ದೆ ಮಾಡುತ್ತಿದೆಯೇ?. ಓಪಿಯಂ ಕೃಷಿ ಮತ್ತು ನಕಲಿ ನೋಟಿನ ದಂಧೆ ರಾಷ್ಟ್ರದ್ರೋಹಿ ಕೃತ್ಯಗಳು. ಈ ಪ್ರಕರಣದ ದಾಖಲೆಗಳು ಕಾಲಿಯಾಚಾಕ್ ಪೊಲೀಸ್ ಠಾಣೆಯಲ್ಲಿರುವುದರಿಂದಲೇ ಆ ಠಾಣೆಯ ಮೇಲೆ ದಾಳಿ ಮಾಡಲಾಯಿತು.