ಶ್ರೀನಗರ: ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಪ್ರಮಾಣದಲ್ಲಿ ದಾಳಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಮಿಲಿಟರಿ ನೆಲೆಗಳನ್ನು ಗುರಿಯಾಗಿರಿಸಿ ಕೊಂಡು ಉಗ್ರರು ಆತ್ಮಾಹುತಿ ದಾಳಿ ನಡೆಸುವ ಹಿನ್ನೆಲೆಯಲ್ಲಿ 9 ನಿಪುಣ ಪ್ರತಿರೋಧ ಪಡೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಸೇನಾ ವರದಿಗಳ ಪ್ರಕಾರ ಈಗಾಗಲೇ ಈ 9 ತಂಡಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ರವಾನಿಸಲಾಗಿದ್ದು, ಜಮ್ಮುವಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ 2 ತಂಡ, ಉಧಮ್ ಪುರದಲ್ಲಿ 3 ಪಡೆಗಳನ್ನು ಮತ್ತು ಉಳಿದ 2 ತಂಡಗಳನ್ನು ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಶ್ಮೀರ ಕಣಿವೆಯಲ್ಲಿನ ಮೂರು ಮತ್ತು ಉಧಂಪುರದಲ್ಲಿ ಸಕ್ರಿಯವಾಗಿರುವ ಎರಡು ಭಯೋತ್ಪಾದಕ ಸಂಘಟನೆಗಳು ಒಗ್ಗೂಡಿದಾಳಿ ನಡೆಸಲಿವೆ ಎಂದು ಗುಪ್ತಚರ ಮೂಲಗಳ ತಿಳಿದುಬಂದಿದ್ದು, ಇದೇ ಕಾರಣಕ್ಕಾಗಿ ಈ ಪ್ರದೇಶಗಳಲ್ಲಿ ರಹಸ್ಯವಾಗಿ ನುರಿತ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸೇನಾ ಟ್ಯಾಂಕರ್ ಗಳ ಫೋಟೋ ಕ್ಲಿಕ್ಕಿಸುತ್ತಿದ್ದ ಗೂಢಚರನ ಸೆರೆ..!
ಪಠಾಣ್‌ಕೋಟ್ ವಾಯುನೆಲೆ ದಾಳಿ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿರುವಂತೆಯೇ, ಪಾಕಿಸ್ತಾನದ ಶಂಕಿತ ಗೂಢಚರನೊಬ್ಬನನ್ನು ಭಾನುವಾರ ಬಂಧಿಸಲಾಗಿದೆ. ಗಡಿಯಲ್ಲಿರುವ ಚೆಕ್‌ಪೋಸ್ಟ್ ಸನಿಹ ಸೇನಾ ಟ್ಯಾಂಕರ್ ಗಳ ಮತ್ತು ಸೇನಾ ಕಟ್ಟಡಗಳ ಫೋಟೋ ಕ್ಲಿಕ್ಕಿಸುತ್ತಿದ್ದ ಎಂದು ಸೇನಾ ಮೂಲಗಳು ತಿಳಿಸಿವೆ. ಬಿಎಸ್‌ಎಫ್ ಶಂಕಿತ ಗೂಢಚರ ಹರ್‌ಪ್ರೀತ್ ಸಿಂಗ್ ನನ್ನು ಬಂಧಿಸಿದ್ದು, ಈ ವೇಳೆ ಈತ ಪೊದೆಯೊಂದರಲ್ಲಿ ಅಡಗಿಕೊಂಡಿದ್ದ ಎಂದು ತಿಳಿದುಬಂದಿದೆ. ಹರ್‌ಪ್ರೀತ್ ಸಿಂಗ್ ಪ್ರಮುಖ ಸೇನಾ ಸ್ಥಳಗಳ ಮಾಹಿತಿ ಕಲೆಹಾಕುತ್ತಿದ್ದ ಎಂದು ಸೇನೆ ಹೇಳಿದೆ
ಬಂಧಿತನನ್ನು ಬಳಿಕ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆತನ ಮೊಬೈಲ್‌ನಿಂದ ಹೋದ ಕರೆಗಳ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.