ನವದೆಹಲಿ: ಜಲ್ಲಿಕಟ್ಟು ಮತ್ತು ಎತ್ತಿನ ಓಟ ಸ್ಪರ್ಧೆಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ತೆರವುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಪೇಟಾ ಮತ್ತು ಇತರ ಸಂಘಟನೆಗಳು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿವೆ.
ಭಾರತೀಯ ಪ್ರಾಣಿ ಅಭಿವೃದ್ಧಿ ಮಂಡಳಿ, ಪೇಟಾ ಹಾಗೂ ಭಾರತೀಯ ಪ್ರಾಣಿ ರಕ್ಷಣಾ ಸಂಘಟನೆ, ಕಂಪಾಶನ್ ಅನ್ ಲಿಮಿಟೆಡ್ ಪ್ಲಸ್ ಆಕ್ಷನ್ ಸಂಘಟನೆಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮುಂದೆ ಅರ್ಜಿ ಸಲ್ಲಿಸಿವೆ.
ಮೊನ್ನೆ 7ನೇ ತಾರೀಖಿನಂದು ಜಲ್ಲಿಕಟ್ಟು ಮತ್ತು ಎತ್ತಿನ ಗಾಡಿ ಓಟದ ಪಂದ್ಯಗಳಿಗೆ ಅನುಮತಿ ನೀಡಿ ಕೇಂದ್ರ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ತಮಿಳುನಾಡಿನಲ್ಲಿ ಇನ್ನೆರಡು ದಿನಗಳಲ್ಲಿ ಪೊಂಗಲ್ ಆಚರಣೆ ಸಂದರ್ಭದಲ್ಲಿ ಜಲ್ಲಿಕಟ್ಟನ್ನು ಆಯೋಜಿಸಲಿರುವುದರಿಂದ ತಕ್ಷಣವೇ ಈ ಕುರಿತು ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ಅರ್ಜಿಯಲ್ಲಿ ಕೋರ್ಟನ್ನು ಒತ್ತಾಯಿಸಲಾಗಿದೆ.
ಪರಿಸರ ಸಚಿವಾಲಯ ಜುಲೈ 11, 2011ರಂದು ಆಚರಣೆ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಈಗ ಅದನ್ನು ತಿದ್ದುಪಡಿ ಮಾಡಿ ಭಾರತೀಯ ಪ್ರಾಣಿ ಅಭಿವೃದ್ಧಿ ಮಂಡಳಿಯ ಸಲಹೆಯನ್ನು ಕೂಡ ಕೇಳದೆ ಅಧಿಸೂಚನೆಯನ್ನು ಪ್ರಕಟಿಸಿದೆ. ಜಲ್ಲಿಕಟ್ಟು ಅಥವಾ ಎತ್ತಿನ ಓಟದಲ್ಲಿ ಎತ್ತುಗಳಿಗೆ ಕ್ರೂರ ಹಿಂಸೆ ನೀಡಲಾಗುತ್ತದೆ ಎಂದು ಪ್ರಾಣಿದಯಾ ಸಂಘಟನೆಯವರು ಅರ್ಜಿಯಲ್ಲಿ ವಿವರಿಸಿದ್ದಾರೆ.