ಇಸ್ಲಾಮಾಬಾದ್: ಪಠಾಣ್ ಕೋಟ್ ವಾಯು ನೆಲೆ ಮೇಲಿನ ಉಗ್ರರ ದಾಳಿಯನ್ನು ತನಿಖೆ ನಡೆಸಲು ಉನ್ನತ ಮಟ್ಟದ ತಂಡವನ್ನು ನೇಮಕ ಮಾಡುವಂತೆ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಸೋಮವಾರ ಆದೇಶಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಜ.15 ರಂದು ನಡೆಯಲಿರುವ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಪಠಾಣ್ ಕೋಟ್ ದಾಳಿ ಕುರಿತಂತೆ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಷರೀಫ್ ಅವರು ಇದೀಗ ದಾಳಿ ಕುರಿತಂತೆ ಉನ್ನತ ಮಟ್ಟದ ತನಿಖಾ ತಂಡವನ್ನು ನೇಮಿಸುವಂತೆ ಆದೇಶಿಸಿದ್ದಾರೆಂದು ಹೇಳಲಾಗುತ್ತಿದೆ.
ಈಗಾಗಲೇ ಷರೀಫ್ ಅವರು ಗುಪ್ತಚರ ಇಲಾಖೆ, ಆಂತರಿಕ ಗುಪ್ತಚರ ಇಲಾಖೆಯ ಅಧಿಕಾರಿಗಳು, ಸೇನಾ ಗುಪ್ತಚರ ಇಲಾಖೆಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ದಾಳಿ ಕುರಿತಂತೆ ಉನ್ನತ ಮಟ್ಟದ ತಂಡ ನೇಮಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ ಎಂದು ಹೇಳಲಾಗುತ್ತಿದೆ.