ದೇಶ

ಬಹುಪತ್ನಿಯರನ್ನು ಹೊಂದಿದ್ದರೆ ಉರ್ದು ಶಿಕ್ಷಕರ ಹುದ್ದೆ ಸಿಗಲ್ಲ: ಉತ್ತರ ಪ್ರದೇಶ ಸರ್ಕಾರ

Srinivas Rao BV

ಲಖನೌ: ಇಬ್ಬರು ಪತ್ನಿಯರನ್ನು ಹೊಂದಿರುವವರು ಸರ್ಕಾರಿ ಉರ್ದು ಶಾಲೆಗಳಲ್ಲಿ ಸಹಾಯಕ ಉರ್ದು ಶಿಕ್ಷಕರ ಹುದ್ದೆ ಪಡೆಯಲು ಅನರ್ಹರಾಗುತ್ತಾರೆ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದರೊಳಗೆ ಉತ್ತರ ಪ್ರದೇಶ ಸರ್ಕಾರ 3 ,500 ಉರ್ದು ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದು, ಇಬ್ಬರು ಪತ್ನಿಯರನ್ನು ಹೊಂದಿರುವವರು ಶಿಕ್ಷಕರ ಹುದ್ದೆ ಪಡೆಯಲು ಅನರ್ಹರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.
ಇಬ್ಬರನ್ನು ವಿವಾಹವಾಗಿರುವ ವ್ಯಕ್ತಿಯ ಪತ್ನಿಯರಿಗೂ ಸಹ ಈ ಆದೇಶ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. ಆದರೆ ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಂ ಸಂಘಟನೆಗಳು ಉತ್ತರ ಪ್ರದೇಶ ಸರ್ಕಾರ ಮುಸ್ಲಿಮರ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿವೆ. ಬಹುಪತ್ನಿಯರಿದ್ದರೆ ಶಿಕ್ಷಕರ ಮರಣಾನಂತರ ಪಿಂಚಣಿಯನ್ನು ಯಾರಿಗೆ ನೀಡಬೇಕು ಎಂಬ ಗೊಂದಲ ಸೃಷ್ಟಿಯಾಗುವುದರಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿದೆ.
ಉತ್ತರ ಪ್ರದೇಶ ಸರ್ಕಾರದ ಈ ಆದೇಶ ಉರ್ದು ಶಿಕ್ಷಕರಿಗೆ ಮಾತ್ರವಲ್ಲದೇ ಎಲ್ಲಾ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ. ಇಸ್ಲಾಂ ಪ್ರಕಾರ ಒಬ್ಬರಿಗೆ ನಾಲ್ಕು ಮದುವೆಯಾಗುವ ಹಕ್ಕಿದೆ. ಉತ್ತರ ಪ್ರದೇಶ ಸರ್ಕಾರ ಇಂತಹ ಆದೇಶವನ್ನು ಹೊರಡಿಸುವಂತಿಲ್ಲ, ಪಿಂಚಣಿ ವಿಷಯದಲ್ಲಿ ಗೊಂದಲ ಉಂಟಾಗುತ್ತದೆ ಎಂದಾದರೆ ಇಬ್ಬರೂ ಪತ್ನಿಯರಿಗೂ ಪಿಂಚಣಿಯನ್ನು ಸಮಾನವಾಗಿ ಹಂಚಲಿ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. 

SCROLL FOR NEXT