ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್
ನವದೆಹಲಿ: ಪಾಕಿಸ್ತಾನದ ಕಾರ್ಯದರ್ಶಿಯವರೊಂದಿಗೆ ಭಾರತ ಮಾತುಕತೆ ನಡೆಸುವ ವಿಷಯದ ಅನಿಶ್ಚಿತತೆ ಬಗ್ಗೆ ಮಾತನಾಡಿದ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್, ಈ ಹಿಂದೆಯೂ ಪಾಕಿಸ್ತಾನ ಸೇನೆ ಹಲವಾರು ಬಾರಿ ಶಾಂತಿ ಮಾತುಕತೆಯ ಹಾದಿ ತಪ್ಪಿಸಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದರೂ, ಪಾಕಿಸ್ತಾನ ಸೇನೆ ಅದಕ್ಕೆ ತಯಾರಿರಲಿಲ್ಲ ಎಂಬ ವರದಿಯ ಹಿನ್ನಲೆಯಲ್ಲಿ ಸುಹಾಗ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಶಾಂತಿ ಮಾತುಕತೆಗೆ ಧಕ್ಕೆ ತರುವುದಕ್ಕಾಗಿಯೇ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಸೇರಿಕೊಂಡು ಪಠಾಣ್‌ಕೋಟ್ ಮೇಲೆ ದಾಳಿ ಮಾಡಿತ್ತೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸುಹಾಗ್, ಪಾಕ್ ಈ ರೀತಿ ವರ್ತಿಸಿದ್ದು ಇದು ಮೊದಲೇನೂ ಅಲ್ಲ. ಈ ಮಾತು ಪಠಾಣ್‌ಕೋಟ್ ಬಗ್ಗೆ ಹೇಳಿದ್ದೂ ಅಲ್ಲ ಎಂದಿದ್ದಾರೆ.
ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದು, ಭಾರತೀಯ ಸೇನೆ ದೇಶ ರಕ್ಷಣೆಗೆ ಸದಾ ಸಿದ್ದವಾಗಿಯೇ ಇದೆ ಎಂದು ಸುಹಾಗ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಹಾಗ್, ಪಂಜಾಬ್ ಗಡಿಪ್ರದೇಶದಲ್ಲಿ ನುಸುಳುವಿಕೆ ಬಗ್ಗೆ ಗಮನ ಹರಿಸಬೇಕಿದೆ. ಆ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಬಿಎಸ್‌ಎಫ್ ಈ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.