ನವದೆಹಲಿ: ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿಗೆ ನಿಖರವಾದ ವಿಷ ಯಾವುದು ಎಂಬುದನ್ನು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಬಹಿರಂಗ ಪಡಿಸುತ್ತಿಲ್ಲ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಆರೋಪಿಸಿದ್ದಾರೆ.
ಸುನಂದಾ ಸಾವಿಗೆ ಯಾವ ರಾಸಾಯನಿಕ ಮಿಶ್ರಣದ ವಿಷ ಕಾರಣವಾಯಿತೆಂಬುದನ್ನು ಪೊಲೀಸರು ತಿಳಿಸುತ್ತಿಲ್ಲ. ಇಂಜೆಕ್ಷನ್ ಮೂಲಕ ನೀಡಬಲ್ಲ ಲಿಡೋಕೇನ್ ಎಂಬ ವಿಷಕಾರಿ ಅಂಶವು ಸುನಂದಾ ಅವರ ದೇಹದಲ್ಲಿ ಕಂಡುಬಂದಿತ್ತು ಎಂದು ಎಫ್ ಬಿಐ ಹೇಳಿರುವುದನ್ನು ಬಸ್ಸಿ ಅವರು ಮಾಧ್ಯಮಕ್ಕೆ ತಿಳಿಸಿಲ್ಲ' ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಏಮ್ಸ್ ನಿಂದ ಸುನಂದಾ ಪುಷ್ಕರ್ ಅವರ ಅಂಗಾಂಶಗಳ ಪರೀಕ್ಷಾ ವರದಿಯನ್ನು ನಿನ್ನೆ ಪಡೆದ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದ ದೆಹಲಿ ಪೊಲೀಸ್ ಮುಖ್ಯಸ್ಥ ಬಸ್ಸಿ ಅವರು "ಸುನಂದಾ ಅವರ ಸಾವು ಅಸಹಜ ಕಾರಣಗಳಿಂದಾಗಿ ಸಂಭವಿಸಿದೆ' ಎಂದು ಹೇಳಿದ್ದರು.ಎಫ್ ಬಿ ಐ ತನ್ನ ವರದಿಯಲ್ಲಿ ನಮಗೆ ಕಳುಹಿಸಲಾದ ಅಂಗಾಂಶಗಳ ಯಾವುದೇ ಮಾದರಿಯಲ್ಲಿ ರೇಡಿಯೋ ಆಕ್ಟೀವ್ ಅಂಶಗಳು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿತ್ತು' ಎಂಬುದಾಗಿ ಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ..