ನವದೆಹಲಿ: ಅಮಿತ್ ಶಾ ಅವರನ್ನೇ ಬಿಜೆಪಿಯ ಮುಂದಿನ ಅಧ್ಯಕ್ಷರಾಗಿ ಮುಂದುವರಿಸಲು ಪಕ್ಷ ನಾಯಕರು ಒಮ್ಮತಾಭಿಪ್ರಾಯಕ್ಕೆ ಬಂದಿರುವಂತೆಯೇ ಅದಕ್ಕೆ ಆರ್ ಎಸ್‍ಎಸ್ ಹಲವು ಷರತ್ತುಗಳನ್ನು ವಿಧಿಸಿದೆ ಎಂದು `ಸಿಎನ್‍ಎನ್-ಐಬಿಎನ್' ವರದಿ ಮಾಡಿದೆ.
ಬಿಜೆಪಿಯ ಸಾಂಸ್ಥಿಕ ಚುನಾವಣೆ ಜ.18ರಿಂದ ಜ.23ರ ವರೆಗಿನ ಅವಧಿಯಲ್ಲಿ ನಡೆಯಲಿದೆ. ಅಧ್ಯಕ್ಷೀಯ ಚುನಾವಣೆ ಬಗ್ಗೆ ಬಿಜೆಪಿಯ ಚುನಾವಣಾಧಿಕಾರಿ ಹಾಗೂ ಸಂಸದ ಅವಿನಾಶ್ ರಾಜ್‍ಖನ್ನಾ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದ್ದಾರೆ. ಸದ್ಯ ಅಮಿತ್ ಶಾ ಅವರು ಮೂರು ವರ್ಷಗಳ ಮೊದಲ ಅವಧಿಯನ್ನು ಪೂರ್ತಿಗೊಳಿಸಿದ್ದಾರೆ. ಅವರ ಅವಧಿಯಲ್ಲೇ ಮಹಾರಾಷ್ಟ್ರ, ಪಂಜಾಬ್ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ಅಭೂತಪೂರ್ವ ಜಯ ಗಳಿಸಿತ್ತು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್ ಸಯೀದ್ ಮುಖ್ಯಮಂತ್ರಿಯಾಗಿದ್ದ ವೇಳೆ ಕಣಿವೆ ರಾಜ್ಯದಲ್ಲಿ ಅಧಿಕಾರ ಹಂಚಿಕೊಂಡಿತ್ತು.
ಬದಲಾವಣೆ ಸಾಧ್ಯತೆ?: ಅಮಿತ್ ಶಾ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರೆ ಕೇಂದ್ರ ಸಂಪುಟದಲ್ಲಿ ಮತ್ತು ಬಿಜೆಪಿಯ ಸಂಘಟನೆಯಲ್ಲಿಯೂ ಕೆಲವೊಂದು ಬದಲಾವಣೆಗಳು ನಡೆಯುವ ಸಂಭವ ಇದೆ. ಏಕೆಂದರೆ ಹಾಲಿ ವರ್ಷ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಜತೆಗೆ 2017ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯೂ ನಡೆಯಲಿರುವುದರಿಂದ ಬಿಜೆಪಿ ತನ್ನ ಪದಾಧಿಕಾರಿಗಳನ್ನು ಸೂಕ್ಷ್ಮವಾಗಿ ಆಯ್ಕೆಮಾಡಬೇಕಾಗಿದೆ. ಹೀಗಾಗಿ ಹೆಚ್ಚು ಸಾಧನೆ ಮಾಡದ ಸಚಿವರನ್ನು ಮತ್ತೊಂದು ಖಾತೆಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೋಲಿಗೆ ಆಕ್ಷೇಪ
ದೆಹಲಿ, ಬಿಹಾರ ವಿಧಾನಸಭೆ ಚುನಾವಣೆ ಯಲ್ಲಿ ಸೋಲು ಅನುಭವಿಸಿದ್ದು ಬಿಜೆಪಿ ಹಿರಿಯ ನಾಯಕರಾದ ಆಡ್ವಾಣಿ, ಜೋಶಿ, ಶಾಂತ ಕುಮಾರ್, ಸಿನ್ಹಾ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಾ ಅವರು 2ನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೆ ಆರ್‍ಎಸ್‍ಎಸ್ ಸಮ್ಮತಿ ಸೂಚಿಸಿದರೂ ಅದಕ್ಕೆ ಹಲವು ಷರತ್ತುಗಳನ್ನು ಒಡ್ಡಬಹುದು ಎನ್ನಲಾಗಿದೆ.