ನವದೆಹಲಿ: ಅತ್ಯಾಚಾರ ಮತ್ತು ಕೊಲೆಯಂಥ ಘೋರ ಅಪರಾಧಗಳಲ್ಲಿ ಭಾಗಿಯಾಗುವ 16ರಿಂದ 18ರ ವಯೋಮಾನದವರನ್ನೂ ವಯಸ್ಕರೆಂದು ತೀರ್ಮಾನಿಸಿ ಶಿಕ್ಷೆಗೆ ಗುರಿಪಡಿಸುವ ಬಾಲಾಪರಾಧ ಕಾಯಿದೆ ಶುಕ್ರವಾರದಿಂದ ಜಾರಿಗೆ ಬರಲಿದೆ.
ಕಳೆದ ವರ್ಷ ಡಿಸೆಂಬರ್ 31ರ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಈ ಕಾಯಿದೆಗೆ ರಾಜ್ಯಸಭೆ ಒಪ್ಪಿಗೆ ನೀಡಿ, ರಾಷ್ಟ್ರಪತಿಗಳ ಅಂಗೀಕಾರಕ್ಕೆ ರವಾನಿಸಿತ್ತು. ಈ ಕುರಿತು ಶುಕ್ರವಾರ ಅದೇಶ ಹೊರಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, `` 2015ರ ಬಾಲಾಪರಾಧ ಕಾಯಿದೆ, 2016ರ ಜನವರಿ 15ರಿಂದಲೇ ಜಾರಿಗೆ ಬರಲಿದೆ. ಕಾನೂನಿನ ಕರಡು ರಚಿಸಲು ವಕೀಲರು, ಹೋರಾಟಗಾರರನ್ನೊಳಗೊಂಡ ತಜ್ಞರ ಸಮಿತಿಯನ್ನು ಇಲಾಖೆ ಶೀಘ್ರವೇ ರಚಿಸಲಿದೆ,'' ಎಂದು ತಿಳಿಸಿದೆ.