ದೇಶ

ರೈತ ಸ್ನೇಹಿ ಪ್ರಧಾನ ಮಂತ್ರಿ ಭೀಮಾ ಯೋಜನೆ: ನರೇಂದ್ರ ಮೋದಿ

Sumana Upadhyaya

ನವದೆಹಲಿ: ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ದೇಶದ ರೈತರನ್ನು ಉದ್ದೇಶಿಸಿ ಬಹಿರಂಗ ಪತ್ರ ಬರೆದಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಟ್ವಿಟ್ಟರ್ ನಲ್ಲಿ ವಿವರವಾಗಿ ಬರೆದಿರುವ ಅವರು, ರೈತರ ಸಹಾಯಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ, ಅವುಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕೂಡ ಒಂದು. ಅವುಗಳ ಬಗ್ಗೆ ಸ್ವಲ್ಪ ಮಾಹಿತಿ ಎಂದು ಪತ್ರದ ಬರಹವನ್ನು ಆರಂಭಿಸಿದ್ದಾರೆ.

'' ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವಿಷಯ ಈಗಾಗಲೇ ನಿಮಗೆ ಗೊತ್ತಿರಬಹುದು. ನಮ್ಮ ದೇಶದ ರೈತರು ಪ್ರಾಕೃತಿಕ ವಿಪತ್ತು ಸಮಯದಲ್ಲಿ ಬೆಳೆ ನಾಶವಾಗಿ, ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಬೆಲೆ ವಿಫಲವಾದ ಸಂದರ್ಭದಲ್ಲಿ ಬಹಳ ತೊಂದರೆ ಅನುಭವಿಸಬಹುದು. ಕಳೆದ 18 ತಿಂಗಳಲ್ಲಿ ಹೀಗೆ ಕಷ್ಟ ಅನುಭವಿಸಿದ ರೈತರಿಗೆ ಸಾಧ್ಯವಾದಷ್ಟು ಸಹಾಯವನ್ನು ಸರ್ಕಾರ ನೀಡುತ್ತಿದೆ. ತೊಂದರೆಯಲ್ಲಿರುವ ರೈತರಿಗೆ ಸಹಾಯ ಮಾಡಲು ವಿಮಾ ಯೋಜನೆಗಳಿದ್ದವು. ಆದರೆ ಅವು ಯಶಸ್ಸು ಕಾಣಲಿಲ್ಲ.ಪ್ರೀಮಿಯಮ್ ಮೊತ್ತ ಹೆಚ್ಚಾಗಿದ್ದು, ರೈತರಿಗೆ ಸಿಗುವ ಹಣ ಕಡಿಮೆಯಾದ್ದರಿಂದ ವಿಮಾ ಯೋಜನೆಗಳು ರೈತರಿಗೆ ಹೆಚ್ಚು ಪ್ರಯೋಜನವಾಗಲಿಲ್ಲ. ಸ್ಥಳೀಯ ಬೆಳೆ ನಾಶಗೊಂಡರೆ ವಿಮೆ ಸಿಗುತ್ತಿರಲಿಲ್ಲ. ಹೀಗಾಗಿ ಶೇಕಡಾ 20ಕ್ಕಿಂತ ಕಡಿಮೆ ಮಂದಿ ರೈತರು ಬೆಳೆ ವಿಮೆಯನ್ನು ತೆಗೆದುಕೊಂಡಿದ್ದರು. ನಿಧಾನವಾಗಿ ಬೆಳೆ ವಿಮೆ ರೈತರ ಮನಸ್ಸಿನಿಂದ ಮರೆಯಾಗಲಾರಂಭಿಸಿತು.

ಇದನ್ನು ಮನಗಂಡ ಕೇಂದ್ರ ಸರ್ಕಾರ ರಾಜ್ಯಗಳು, ರೈತರು ಮತ್ತು ವಿಮಾ ಕಂಪೆನಿಗಳನ್ನೊಳಗೊಂಡ ರೈತ ಸ್ನೇಹಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದೆ.

ಮೊನ್ನೆ ಗುರುವಾರ ಕೇಂದ್ರ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿತ್ತು. ಈ ಬಗ್ಗೆ ದೇಶದ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಪ್ರಧಾನ ಮಂತ್ರಿ ಉತ್ಸುಕರಾಗಿದ್ದಾರೆ. ಇದು ದೇಶದ ರೈತರಿಗೆ ಸಂಕ್ರಾಂತಿ ಹಬ್ಬದ ಕೊಡುಗೆ ಎಂದು ಹೇಳಿದ್ದಾರೆ.

ಈ ಹೊಸ ರೈತ ವಿಮಾ ಯೋಜನೆ ದೇಶದ ರೈತರ ಬಾಳಿನಲ್ಲಿ ಬದಲಾವಣೆ ತರಬಹುದೆಂಬ ವಿಶ್ವಾಸ ನನ್ನದು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

SCROLL FOR NEXT