ನವದೆಹಲಿ: ``ಶಬರಿಮಲೆ ದೇವಾಲಯದ ಸಂಪ್ರದಾಯದಲ್ಲಿ ಸುಪ್ರೀಂ ಮಧ್ಯಪ್ರವೇಶಿಸುವುದನ್ನು ತಪ್ಪಿಸಬಹುದಿತ್ತು'' ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಶಬರಿಮಲೆ ಕುರಿತ ಇತ್ತೀಚೆಗಿನ ಸುಪ್ರೀಂ ಕೋರ್ಟ್ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಿರುವ ರಾಜೀವ್, ``ನಾನು ಒಂದೇ ಒಂದು ಬಾರಿಯೂ ತಪ್ಪದೇ ಸತತ 22 ವರ್ಷಗಳ ಕಾಲ ವಾರ್ಷಿಕ ಶಬರಿಮಲೆ ಯಾತ್ರೆ ನಡೆಸಿದ್ದೇನೆ. ದೀರ್ಘಕಾಲದಿಂದ ನಡೆದುಬಂದಿರುವ ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡುವ ಸುಪ್ರೀಂ ಕೋರ್ಟ್ ಯತ್ನವು ಆಕ್ಷೇಪಾರ್ಹ. ದೇವಸ್ಥಾನಗಳ ಸಂಸ್ಕೃತಿ, ಆಧ್ಯಾತ್ಮಿಕತೆಯನ್ನು ನಾವೆಲ್ಲರೂ ರಕ್ಷಿಸಬೇಕು ಹಾಗೂ ಗೌರವಿಸಬೇಕು'' ಎಂದು ಹೇಳಿದ್ದಾರೆ.
ಜತೆಗೆ, ``ಕೆಲವೊಂದು ಸಂಪ್ರದಾಯ, ವಿಧಿವಿಧಾನಗಳಿಗೆ ಆಧುನಿಕ ರೀತಿಯ ವಿವರಣೆ ನೀಡಲು ಅಸಾಧ್ಯ. ಹಲವು ಹಿಂದೂಗಳು ಹಾಗೂ ಭಾರತೀಯರು ಅತ್ಯಂತ ಆಪ್ಯಾಯಮಾನವಾಗಿ ಅನುಸರಿಸುತ್ತಿರುವಂತಹ ಸಂಪ್ರದಾಯಗಳು ಹಾಗೂ ಮೌಲ್ಯಗಳನ್ನು ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ'' ಎಂದೂ ಹೇಳಿದ್ದಾರೆ ರಾಜೀವ್. ಇದೇ ವೇಳೆ, ದೇವಸ್ಥಾನಗಳ ನಿರ್ವಹಣೆಯ ಹೊಣೆಯಿಂದ ಕೇರಳ ಸರ್ಕಾರವನ್ನು ಹೊರಗಿಟ್ಟು, ಸ್ವಾಯತ್ತ ಭಕ್ತಾದಿಗಳೇ ನಿರ್ವಹಿಸುವ ಟ್ರಸ್ಟ್ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇದು ಇಂದಿನ ಅಗತ್ಯ. ಆಡಳಿತದಲ್ಲಾಗುವ ಈ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಭ್ರಷ್ಟಾಚಾರ ಮಾತ್ರ ಎಲ್ಲೂ ನಡೆಯಬಾರದು ಎಂದೂ ಅವರು ಹೇಳಿದ್ದಾರೆ.