ನವದೆಹಲಿ: ಮಾಜಿ ಶಾಸಕರು, ಮಾಜಿ ಸಂಸದರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ 53 ಪ್ರಯಾಣಿಕ ವಿಭಾಗಗಳ ಸಬ್ಸಿಡಿಗೆ ಕತ್ತರಿ ಹಾಕಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.
ವಾರ್ಷಿಕ ಸಾವಿರ ಕೋಟಿಯನ್ನು ದಾಟಿರುವ ಸಾಮಾಜಿಕ ಹೊಣೆ ಗಾರಿಕೆ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಚಿಂತನೆ ನಡೆಸಲಾಗಿ ದ್ದು, ಉಚಿತ ಮತ್ತು ವಿನಾಯ್ತಿ ದರದ ಪ್ರಯಾಣಕ್ಕೆ ಕತ್ತರಿ ಹಾಕುವ ಕುರಿತು ಯೋಜನೆ ಸಿದ್ಧಪಡಿಸುವಂತೆ ರೈಲ್ವೆ ಮಂಡಳಿಗೆ ಸೂಚಿಸಲಾಗಿದೆ. ಹೀಗೆಂದು ರೈಲ್ವೆ ಇಲಾಖೆ ಸಹಾಯಕ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾಗಿ `ಹಿಂದುಸ್ತಾನ್ ಟೈಮ್ಸ್ ' ವರದಿ ಮಾಡಿದೆ.
ಇಲಾಖೆಯ ಈ ಕ್ರಮದಿಂದಾಗಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲದೆ ರೋಗಿಗಳು, ಕ್ರೀಡಾಳುಗಳು ಹಾಗೂ ಚಕ್ರ ಪ್ರಶಸ್ತಿ ಪುರಸ್ಕೃತರು, ಮಾಜಿ ಶಾಸಕರು ಹಾಗೂ ಸಂಸದರು ನಷ್ಟ ಅನುಭವಿಸಲಿದ್ದಾರೆ. ಹಿರಿಯ ನಾಗರಿಕ ವಿಭಾಗದಲ್ಲಿ ದುರ್ಬಳಕೆ ಅತಿಯಾಗಿರುವುದೂ ಸಬ್ಸಿಡಿ ಕಡಿತ ನಿರ್ಧಾರಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಸಾಮಾಜಿಕ ಹೊಣೆಗಾರಿಕೆಗಾಗಿ ರು.1,400 ಕೋಟಿ ವೆಚ್ಚ ಮಾಡಲಾಗಿದ್ದು, ಈ ಪೈಕಿ ರು.1,150 ಕೋಟಿ ಹಿರಿಯ ನಾಗರಿಕರ ಸಬ್ಸಿಡಿಗಾಗಿಯೀ ವೆಚ್ಚವಾಗಿದೆ.
ಡೀಸೆಲ್, ವಿದ್ಯುತ್ ಚಾಲಿತ ಲೋಕೋಮೋಟಿವ್ ಉತ್ಪಾದನೆ: ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ಡೀಸೆಲ್ ಮತ್ತು ವಿದ್ಯುತ್‍ನಿಂದ ಚಲಿಸುವ ಲೋಕೋಮೋಟಿವ್‍ಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ. ``ರೈಲುಗಳನ್ನು ಡೀಸೆಲ್ ಚಾಲಿತ ಹಾಗೂ ವಿದ್ಯುತ್ ಚಾಲಿತ ಮಾಡುವ ಸಲುವಾಗಿ ನಾವು ದ್ವಿ-ಬಳಕೆಯ ಲೋಕೋಮೋಟಿವ್ ಉತ್ಪಾದನೆ ಮಾಡಲಿದ್ದೇವೆ. ವಾರಾಣಸಿಯಲ್ಲಿರುವ ಡೀಸೆಲ್ ಲೋಕೋಮೋಟಿವ್ ವರ್ಕ್ಸ್‍ನಲ್ಲಿ ತಲಾ 4500 ಎಚ್‍ಪಿ ಸಾಮರ್ಥ್ಯದ 5 ಡ್ಯುಯಲ್ -ಮೋಡ್ ಲೋಕೋಮೋಟಿವ್‍ಗಳನ್ನು ಪ್ರಾಯೋಗಿಕವಾಗಿ ಉತ್ಪಾದಿಸಲಿದ್ದೇವೆ,'' ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಇಂತಹ ಲೋಕೋಮೋಟಿವ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿ ಇದು ಮೊದಲ ಪ್ರಯತ್ನ. ಡ್ಯುಯಲ್ ಮೋಡ್ ಲೋಕೋಗಳ ಬಳಕೆ ಆರಂಭವಾದರೆ, ವಿದ್ಯುತ್ ಕರ್ಷಣಕ್ಕಾಗಿ ಲೋಕೋಮೋಟಿವ್ ಅನ್ನು ಬದಲಾಯಿಸಬೇಕಾದ ಅಗತ್ಯವಿರುವುದಿಲ್ಲ. ಏಕೆಂದರೆ, ಅದೇ ಡೀಸೆಲ್ ಎಂಜಿನ್ ಅನ್ನು ಎಲೆಕ್ಟ್ರಿಫೆೈಡ್ ರೂಟ್‍ನಲ್ಲೂ ಬಳಕೆ ಮಾಡಬಹುದು. ಡ್ಯುಯಲ್ ಮೋಡ್ ಲೋಕೋಗೆ ಅಂದಾಜು ರು.18 ಕೋಟಿ ವೆಚ್ಚವಾದರೆ, 4500 ಎಚ್‍ಪಿ ಡೀಸೆಲ್ ಲೋಕೋಮೋಟಿವ್‍ಗೆ ರು.13 ಕೋಟಿ ವೆಚ್ಚವಾಗಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.