ತ್ರಿಶ್ಶೂರ್: ಶೋಭಾ ಸಿಟಿ ಅಪಾರ್ಟ್ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಂದ್ರಬೋಸ್ ಎಂಬಾತನನ್ನು ವಾಹನ ಡಿಕ್ಕಿ ಹೊಡೆದು ಕೊಲೆ ಮಾಡಿದ ಪ್ರಕರಣದ ಅಪರಾಧಿ ಮುಹಮ್ಮದ್ ನಿಶಾಮ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ತ್ರಿಶ್ಶೂರ್ ಅಡಿಷನಲ್ ಜಿಲ್ಲಾ ಸೆಷನ್ ಕೋರ್ಟ್ ಈತ ಅಪರಾಧಿಯೆಂದು ತೀರ್ಪು ನೀಡಿದ್ದು, ಗುರುವಾರ ಶಿಕ್ಷೆ ಘೋಷಿಸಿದೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ನಿಶಾಮ್‌ಗೆ ಜೀವಾವಧಿ ಶಿಕ್ಷೆಯ ಜತೆಗೆ 24 ವರ್ಷ ಜೈಲುವಾಸ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ರು. 70, 35000 ದಂಡವನ್ನು ವಿಧಿಸಿರುವ ನ್ಯಾಯಾಲಯ ಇದರಲ್ಲಿ ರು. 50 ಲಕ್ಷವನ್ನು ಚಂದ್ರಬೋಸ್‌ನ ಕುಟುಂಬಕ್ಕೆ ನೀಡುವಂತೆ ಆದೇಶಿಸಿದೆ.
427 ಸೆಕ್ಷನ್ ಪ್ರಕಾರ ಎರಡು ವರ್ಷ ಜೈಲು, ರು. 20000 ದಂಡ, 449 ಸೆಕ್ಷನ್ ಪ್ರಕಾರ 5 ವರ್ಷ ಜೈಲು ಮತ್ತು ರು. 1000 ದಂಡ, 506 ಸೆಕ್ಷನ್ ಪ್ರಕಾರ್ 3 ವರ್ಷ ಜೈಲು ಮತ್ತು 447 ಸೆಕ್ಷನ್ ಪ್ರಕಾರ 5 ವರ್ಷ ಜೈಲು -ಈ ರೀತಿ ನ್ಯಾಯಾಲಯಕ ಶಿಕ್ಷೆ ವಿಧಿಸಿತ್ತು. ತಪ್ಪು ಸಾಕ್ಷ್ಯ ನೀಡಿದ್ದಕ್ಕಾಗಿ ನಿಶಾಮ್‌ನ ಪತ್ನಿ ಅವರ ವಿರುದ್ಧವೂ ಕೇಸು ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ನಿಶಾಮ್ ಕಿಂಗ್ಸ್ ಗ್ರೂಪ್ ಆಫ್ ಕಂಪನಿಯ ಎಂಡಿ ಆಗಿದ್ದಾರೆ.
ಏನಿದು ಪ್ರಕರಣ: 2015 ಜನವರಿ 29ರಂದು ನಿಶಾಮ್, ಚಂದ್ರಬೋಸ್‌ನ್ನು ಹತ್ಯೆ ಮಾಡಲು ಯತ್ನಿಸಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದ ನಿಶಾಮ್ ಕಾರಿನಲ್ಲಿ ಬರುತ್ತಿದ್ದ ವೇಳೆ ಗೇಟ್ ತೆರೆಯಲು ವಿಳಂಬವಾದುದಕ್ಕೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಂದ್ರಬೋಸ್ ಮೇಲೆ ಸಿಟ್ಟಾಗಿ ಸೆಕ್ಯೂರಿಟಿ ಕ್ಯಾಬಿನ್ ಮೇಲೆ ಕಾರು ಹತ್ತಿಸಿದ್ದರು. ನಂತರ ಅಲ್ಲಿಂದ ಜೀವ ಭಯದಿಂದ ಓಡುತ್ತಿದ್ದ ಚಂದ್ರಬೋಸ್ ಮೇಲೆ ಹಮ್ಮರ್ ಕಾರು ಹರಿಸಿದ್ದರು. ತೀವ್ರ ಗಾಯಗಳಾಗಿದ್ದ ಚಂದ್ರಬೋಸ್‌ನ್ನು ತಮ್ಮ ವಾಹನದಲ್ಲಿ ಎತ್ತಿ ಹಾಕಿಕೊಂಡು ನಿಶಾಮ್ ಫ್ಲಾಟ್‌ಗೆ ಕೊಂಡೊಯ್ದಿದ್ದು, ಪೊಲೀಸ್ ಬಂದ ನಂತರ ಚಂದ್ರಬೋಸ್‌ನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿ 16 ರಂದು ಚಂದ್ರಬೋಸ್ ಸಾವಿಗೀಡಾಗಿದ್ದನು.