ದೇಶ

ಅನುಮಾನಾಸ್ಪದವಾಗಿ ಪತ್ನಿ ಸತ್ತರೆ ಪತಿಗೆ ಆಸ್ತಿ ಇಲ್ಲ: ಸುಪ್ರೀಂ ಕೋರ್ಟ್

Srinivasamurthy VN

ನವದೆಹಲಿ: ವಿವಾಹವಾಗಿ 7 ವರ್ಷದ ಒಳಗೆ ಪತ್ನಿಯು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟರೆ, ಆಕೆಯ ಹೆಸರಲ್ಲಿರುವ ಆಸ್ತಿ, ವರದಕ್ಷಿಣೆ ಹಾಗೂ ಉಡುಗೊರೆಗಳ ಮೇಲೆ ಪತಿಗೆ ಯಾವುದೇ  ಹಕ್ಕು ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮೃತ ಪತ್ನಿಯ ಆಸ್ತಿಗಾಗಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ  ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಪೀಠ, ವಿವಾಹವಾಗಿ ಏಳು ವರ್ಷಗಳ ಅವಧಿಯೊಳಗೆ ಪತ್ನಿ ಅನುಮಾನಾಸ್ಪದ  ಸಾವಿಗೀಡಾದರೆ ವಿವಾಹ ಸಂದರ್ಭದಲ್ಲಿ ಉಡುಗೊರೆ ರೂಪದಲ್ಲಿ ಪತ್ನಿಗೆ ನೀಡಲಾಗಿರುವ ಹಣ, ಸಂಪತ್ತಿನ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ. ಪತ್ನಿ ಆಸ್ತಿ, ವರದಕ್ಷಿಣೆ ರೂಪದಲ್ಲಿ  ಬಂದ ಹಣ ಮತ್ತು ಇತರೆ ವಸ್ತುಗಳು, ಉಡುಗೊರೆಗಳ ಮೇಲೂ ಪತಿಗೆ ಹಕ್ಕಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇನ್ನು ಪತ್ನಿ ಸತ್ತರೆ ಆಕೆಗೆ ಸಂಬಂಧಿಸಿದ ಸಂಪೂರ್ಣ ಆಸ್ತಿಯ ಹಕ್ಕು ಆಕೆಯ ಮಕ್ಕಳಿಗಿರುತ್ತದೆ. ಒಂದು ವೇಳೆ ದಂಪತಿಗಳಿಗೆ ಮಕ್ಕಳಿಲ್ಲದೇ ಹೋದರೆ ಆ ಹಕ್ಕು ಪತ್ನಿಯ ಪೋಷಕರಿಗೆ  ಹೋಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ.ಟಿಎಸ್ ಠಾಕೂರ್, ನ್ಯಾ.ಎಕೆ ಸಿಖ್ರಿ ಮತ್ತು ನ್ಯಾ.ಆರ್ ಭಾನುಮತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ.

ಅಂತೆಯೇ ಸಹಜ ಸಾವಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ ಎಂದೂ ಪೀಠ ಸ್ಪಷ್ಟಪಡಿಸಿದೆ.

SCROLL FOR NEXT