ಪುಣೆ: ನನ್ನ ಮಗ ಹಿಂದುವಾಗಿದ್ದರೂ ಕೂಡ ಐಸಿಸ್ ಉಗ್ರಗಾಮಿ ಸಂಘಟನೆ ಜೊತೆ ಗುರುತಿಸಿಕೊಂಡಿದ್ದಾನೆ ಎಂದು ಶಂಕಿಸಿ ಬಲಪಂಥೀಯರು ಸಜೀವವಾಗಿ ದಹನ ಮಾಡಿ ಕೊಂದು ಹಾಕಿದ್ದಾರೆ ಎಂದು 'ಪುಣೆಯ ಹದಿನೇಳರ ಹರೆಯದ, ಚಿಂದಿ ಆಯುವ ಫುಟ್‌ಪಾತ್ ವಾಸಿ ಸಾವನ್ ರಾಠೊಡ್ ನ ತಂದೆ ಧರ್ಮ ರಾಠೊಡ್ ಆರೋಪಿಸಿದ್ದಾರೆ.
ಆದರೆ ಕೊಲೆಯ ಹಿಂದೆ ಯಾವುದೇ ಕೋಮುವಾದವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪುಣೆ ನಗರದ ಕಸ್ಬಾ ಪೇಟೆಯ ನಿವಾಸಿಯಾಗಿರುವ ಸಾವನ್ ರಾಠೊಡ್ ನ ಮೇಲೆ ಮೂವರು ಶಂಕಿತರು ಮೊನ್ನೆ ಜನವರಿ13ರಂದು ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ತೀವ್ರ ಸುಟ್ಟಗಾಯಗಳಿಂದ ನರಳುತ್ತಿದ್ದ ಸಾವನ್ ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. 15ರಂದು ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.
"ನಾನು ಹಿಂದು ಅಂತ ಗೊತ್ತಾದ ಬಳಿಕ ಮೂವರು ಶಂಕಿತರು ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಅಂತ ನನ್ನ ಮಗ ಆಸ್ಪತ್ರೆಯಲ್ಲಿದ್ದಾಗ ನನಗೆ ಹೇಳಿದ್ದ. ನನ್ನ ಮಗನನ್ನು ಕೊಂದ ರೀತಿಯನ್ನು ನೋಡಿದರೆ ಇದು ಐಸಿಸ್ ಉಗ್ರರು ಮಾಡುವ ರೀತಿಯಲ್ಲೇ ಇದೆ ಅಂತ ನನಗೆ ಭಾವನೆ ಬರುತ್ತದೆ. ಈ ಬಗ್ಗೆ ಎಟಿಎಸ್ ತನಿಖೆ ನಡೆಯಬೇಕು; ಆಗ ಮಾತ್ರವೇ ಸತ್ಯ ಹೊರಬರಬಹುದು' ಎಂದು ಧರ್ಮ ರಾಠೊಡ್ ಹೇಳಿದ್ದಾರೆ.
"ನನ್ನ ಮಗ ನೀಡಿರುವ ಹೇಳಿಕೆಯ ವಿಡಿಯೋ ಚಿತ್ರೀಕರಣವನ್ನು ನಾನು ಪೊಲೀಸರಿಗೆ ನೀಡಿದ್ದೇನೆ' ಎಂದೂ ಅವರು ಹೇಳಿದ್ದಾರೆ.
ಆದರೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡು "ಸಾವನ್ ಗೆ ವಾಹನಗಳ ಬಿಡಿಭಾಗಗಳನ್ನು ಕದಿಯುವ ಅಭ್ಯಾಸವಿತ್ತು. ಹೀಗೆ ಮೊನ್ನೆ ಕದಿಯುವಾಗ ಸಿಕ್ಕಿಹಾಕಿಕೊಂಡಿದ್ದಾನೆ. ಆಗ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರಬಹುದು ಎಂದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.