ಇಸ್ಲಾಮಾಬಾದ್: ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣದ ಪ್ರಮುಖ ರೂವಾರಿ ಮಸೂದ್ ಅಜರ್ ನನ್ನು ಜಂಟಿ ತನಿಖೆಗೊಳಪಡಿಸುವ ಕುರಿತು ಭಾರತ ಸಲ್ಲಿಸಿದ್ದ ಪ್ರಸ್ತಾಪವನ್ನು ಪಾಕಿಸ್ತಾನ ನಿರಾಕರಿಸಿದೆ.
ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯ ಮೇಲೆ ಜನವರಿ 2ರಂದು ಉಗ್ರರು ದಾಳಿ ನಡೆಸಿದ್ದರು. ಪ್ರಕರಣದ ಹಿಂದೆ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಮತ್ತು ಜೆಇಎಂ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ನೇರ ಕೈವಾಡವಿರುವ ಕುರಿತು ಭಾರತ ಸಾಕ್ಷ್ಯ ಒದಗಿಸಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡಿದ್ದ ಪಾಕಿಸ್ತಾನ ಸರ್ಕಾರ ಕಾರ್ಯಾಚರಣೆ ನಡೆಸಿ ಕೆಲ ಉಗ್ರರನ್ನು ಮತ್ತು ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಬಂಧನಕ್ಕೊಳಪಡಿಸಿತ್ತು.
ಇದೀಗ ಪ್ರಕರಣ ಸಂಬಂಧ ಭಾರತೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಪಾಕಿಸ್ತಾನದಲ್ಲಿ ಸೆರೆಯಾಗಿರುವ ಮಸೂದ್ ಅಜರ್ ನನ್ನು ಮತ್ತು ಇತರೆ ಉಗ್ರಗಾಮಿಗಳನ್ನು ತನಿಖೆಗೊಳಪಡಿಸುವ ಕುರಿತು ಆಸಕ್ತಿ ತೋರಿವೆ. ಇದೇ ಕಾರಣಕ್ಕಾಗಿ ಭಾರತೀಯ ತನಿಖಾ ಸಂಸ್ಥೆಗಳು ಜಂಟಿ ತನಿಖೆಗೆ ಪಾಕಿಸ್ತಾನಕ್ಕೆ ಪ್ರಸ್ತಾಪ ಸಲ್ಲಿಸಿದ್ದವು. ಆದರೆ ಭಾರತದ ಪ್ರಸ್ತಾಪವನ್ನು ಪಾಕಿಸ್ತಾನ ಸರ್ಕಾರ ತಿರಸ್ಕರಿಸಿದೆ.
ಈ ಬಗ್ಗೆ ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಗೆ ಮಾಹಿತಿ ನೀಡಿರುವ ಹಿರಿಯ ಭದ್ರತಾ ಅಧಿಕಾರಿಯೊಬ್ಬರು, ಮೊದಲಿನಿಂದಲೂ ಭಾರತ ಮಸೂದ್ ನನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಕೇಳಿತ್ತು. ಹಲವು ಬಾರಿ ಭಾರತದ ಪ್ರಸ್ತಾಪವನ್ನು ನಾವು ನಿರಾಕರಿಸಿದ್ದೆವು. ಹೀಗಾಗಿ ಕನಿಷ್ಠ ಜಂಟಿ ತನಿಖೆಗೆಯಾದರೂ ಅವಕಾಶ ಕಲ್ಪಿಸಬೇಕು ಎಂದು ಭಾರತ ಪ್ರಸ್ತಾಪ ಸಲ್ಲಿಸಿತ್ತು.ಆದರೆ ಪಾಕಿಸ್ತಾನ ಕಾನೂನಿನಲ್ಲಿ ಇದಕ್ಕೆ ಆಸ್ಪದವಿಲ್ಲ. ಪಾಕಿಸ್ತಾನದ ತನಿಖಾಧಿಕಾರಿಗಳು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಪಾಕಿಸ್ತಾನಕ್ಕೆ ಭಾರತ ನೀಡಿರುವ ಸಾಕ್ಷ್ಯಗಳು ಮತ್ತು ಮಾಹಿತಿ ಮೇರೆಗೆ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ನಾವು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.