ಹೈದರಾಬಾದ್/ ಮುಂಬೈ: ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ ಸಂಬಂಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ ಸೋಮವಾರ ಜಂಟಿ ಕ್ರಿಯಾ ಸಮತಿ ಕರೆ ನೀಡಿದ್ದ ಚಲೋ ಹೈದರಾಬಾದ್ ಪ್ರತಿಭಟನಾ ರ್ಯಾಲಿಗೆ ದೇಶಾದ್ಯಂತದ ಹಲವು ವಿವಿಗಳ ವಿದ್ಯಾರ್ಥಿಗಳು ಹರಿದು ಬಂದಿದ್ದು, ಕೆಲವು ಸಾಮಾಜಿಕ ಸಂಘಟನೆಗಳೂ ಪ್ರತಿಭಟನೆಗೆ ಸಾಥ್ ನೀಡಿವೆ.
ಸೋಮವಾರ ಬೆಳಗ್ಗಿನಿಂದಲೇ ಹೈದರಾಬಾದ್ ವಿವಿ ಕ್ಯಾಂಪಸ್‌ನತ್ತ ವಿದ್ಯಾರ್ಥಿಗಳ ಸಮೂಹವೇ ಹರಿದು ಬರಕೊಡಗಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಂಪಸ್ ಸುತ್ತಲೂ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ಕೇರಳದ ಕಲ್ಲಿಕೋಟೆ ವಿವಿ, ಪಾಂಡಿಚೇರಿ ವಿವಿ, ಒಸ್ಮಾನಿಯಾ ವಿವಿ ,ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿವಿ ಸೇರಿ ದೇಶಾದ್ಯಂತ ಹಲವು ವಿವಿಗಳ ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು, ಇತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಡಾ. ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರೂ ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ.
ಬಂದ್ ಕರೆ ಎಚ್ಚರಿಕೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು , ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ ಎಸ್ಟಿ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವ ರೋಹಿತ್ ಕಾಯ್ದೆ ಜಾರಿ ಮಾಡಬೇಕು ಎಂದು ಪ್ರತಿಭಟನಾರರು ಆಗ್ರಹಿಸಿದ್ದಾರೆ. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ಬಂದ್‌ಗೆ ಕರೆ ನೀಡುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿದ್ಯಾರ್ಥಿಗಳು- ಆರೆಸ್ಸೆಸ್ ಘರ್ಷಣೆ: ರೋಹಿತ್ ಸಾವು ಖಂಡಿಸಿ ಮುಂಬೈನ ಧಾರಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆರೆಸ್ಸೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸುಮಾರು 12 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಯ ವೇಳೆ ಆರೆಸ್ಸೆಸ್ ಕಾರ್ಯಕರ್ತರು ಕಲ್ಲು ಮತ್ತು ಕೋಲುಗಳ ಮೂಲಕ ಹಲ್ಲೆ ನಡೆಸಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದರೆ, ಸಂಘದ ಬಗ್ಗೆ ಅವಹೇಳನಕಾರಿ ಘೋಷಣೆ ಕೂಗಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದಾಗ ಘರ್ಷಣೆ ನಡೆಯಿತು ಎಂದು ಆರೆಸ್ಸೆಸ್ ಕಾರ್ಯಕರ್ತರು ತಿಳಿಸಿದ್ದಾರೆ.
ಇಂದಿನಿಂದ ಹೊಸ ಎಸ್ಸಿ/ ಎಸ್ಟಿ ಕಾಯ್ದೆ ಜಾರಿ
ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರ ವಿರುದ್ಧ ದೌರ್ಜನ್ಯವೆಸಗುವ, ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರದ ಮೂಲಕ ಅವರ ಘನತೆಗೆ ಧಕ್ಕೆ ತರುವಂತಹ ಕೆಲಸಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹೊಸ ತಿದ್ದುಪಡಿ ಕಾಯ್ದೆಯು ಮಂಗಳವಾರದಿಂದ ಜಾರಿಗೆ ಬರಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ, 2015ರ ಪ್ರಕಾರ, ಇನ್ನು ಮುಂದೆ ತಲೆ ಬೋಳಿಸುವಿಕೆ, ನಿರಾವರಿ ಸೌಲಭ್ಯ ಅಥವಾ ಅರಣ್ಯ ಹಕ್ಕುಗಳ ನಿರಾಕರಣೆ, ಚಪ್ಪಲಿ ಹಾರ, ಮನುಷ್ಯ ಅಥವಾ ಅರಣ್ಯ ಹಕ್ಕುಗಳ ನಿರಾಕರಣೆ. ಚಪ್ಪಲಿ ಹಾರ , ಮನುಷ್ಯ ಅಥವಾ ಪ್ರಾಣಿಗಳ ಮಲ ಹೊರುವಿಕೆ, ಎಸ್ಸಿ ಎಸ್ಟಿ ಮಹಿಳೆಯರನ್ನು ದೇವದಾಸಿಯಂತೆ ನಡೆಸಿಕೊಳ್ಳುವುದು, ಜಾತಿ ಹೆಸರಿನಲ್ಲಿ ಅವಹೇಳನದಂತಹ ಕ್ರಮಗಳೂ ದಲಿತ ದೌರ್ಜನ್ಯದಡಿ ಬರುತ್ತದೆ.