ನೇಪಾಳ: ನೇಪಾಳದಲ್ಲಿ ನೂತನ ಸಂವಿಧಾನದ ಕೆಲವು ಅಂಶಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಭಾರತದ ಮೇಲೂ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿರುವ ನೇಪಾಳ ಸಿವಿಲ್ ಸೊಸೈಟಿ ನಾಯಕರು ಅಲ್ಲಿನ ಬಿಕ್ಕಟ್ಟನ್ನು ಬಗೆಹರಿಸಲು ಭಾರತದ ಪ್ರಜಾಪ್ರಭುತ್ವ ಪ್ರಭಾವದ ಸಹಾಯ ಕೋರಿದ್ದಾರೆ.
ನೇಪಾಳದ ಟೆರೈ ಪ್ರಾಂತ್ಯದಲ್ಲಿರುವ ಮಾದೇಶಿ ಜನಾಂಗದವರು ನಡೆಸುತ್ತಿರುವ ಪ್ರತಿಭಟನೆ, ನೇಪಾಳದೊಂದಿಗೆ ಗಡಿ ಹಂಚಿಕೊಂಡಿರುವ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ಮೇಲೆ ಸಾಮಾಜಿಕ- ಆರ್ಥಿಕ ಪರಿಣಾಮಗಳನ್ನು ಬೀರಲಿದೆ ಎಂದು ನೇಪಾಳದ ಮಾಜಿ ರಾಯಭಾರಿ ವಿಜಯ್. ಕೆ ಕರ್ಣ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ಹೀಗೆಯೇ ಮುಂದುವರೆದರೆ ನೇಪಾಳದಲ್ಲಿ, ಪ್ರತ್ಯೇಕತಾವಾದ ಚಳುವಳಿ, ಭಯೋತ್ಪಾದನೆ ಉಂಟಾಗಿ ಸಾರ್ವಜನಿಕರ ಹತ್ಯೆ ನಡೆಯುವ ಸ್ಥಿತಿ ಉಂಟಾಗುತ್ತದೆ, ಶ್ರೀಲಂಕಾದಲ್ಲಿ ಉಂಟಾದ ಪರಿಸ್ಥಿತಿ ನೆಪಾಳದಲ್ಲೂ ಉಂಟಾಗಬಾರದೆಂದರೆ ಭಾರತದ ಪ್ರಜಾಪ್ರಭುತ್ವ ಪ್ರಭಾವದ ಸಹಾಯ ಅಗತ್ಯವಿದೆ ಎಂದು ಕರ್ಣ ಅಭಿಪ್ರಾಯಪಟ್ಟಿದ್ದಾರೆ.
ಮದೇಶಿ ಸಮುದಾಯದ ಪ್ರತಿಭಟನೆ ಯಿಂದ ನೇಪಾಳದಲ್ಲಿ ಈಗಾಗಲೇ 50 ಕ್ಕೂ ಹೆಚ್ಚು ಜನರು ಪ್ರಾಣಕಳೆದುಕೊಂಡಿದ್ದಾರೆ. ಪ್ರತಿಭಟನೆ ಮುಂದುವರೆದರೆ ಮತ್ತಷ್ಟು ಜನರ ಹತ್ಯೆಯಾಗಲಿದೆ. ಅಲ್ಲದೇ ಇಲ್ಲಿನ ಯುವಕರು ಭದ್ರತೆಗಾಗಿ ಭಾರತಕ್ಕೆ ವಲಸೆ ಬರಬೇಕಾಗುತ್ತದೆ. ಶ್ರೀಲಂಕಾ ವಿಚಾರದಲ್ಲಿ ಭಾರತ ಹಸ್ತಕ್ಷೇಪ ಮಾಡಿದಂತೆ ನೇಪಾಲದ ವಿಚಾರದಲ್ಲಿ ಆಗುವುದು ಬೇಡ, ಆದ್ದರಿಂದ ನೇಪಾಳದ ಬಿಕ್ಕಟ್ಟು ಶ್ರೀಘ್ರವೇ ಬಗೆಹರಿಯುವ ಅಗತ್ಯವಿದೆ. ನೇಪಾಳದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾರತ ಹಿಂದಿನಿಂದಲೂ ನೆರವು ನೀಡುತ್ತಿದೆ, ಅದನ್ನು ನಾವು ಎಂದಿಗೂ ಹಸ್ತಕ್ಷೇಪ ಎಂದು ಭಾವಿಸಿಲ್ಲ. ಬದಲಾಗಿ ಬಿಕ್ಕಟ್ಟನ್ನು ಬಗೆಹರಿಸಲು ಭಾರತ ಸರ್ಕಾರ ತನ್ನ ಪ್ರಭಾವವನ್ನು ಬಳಸಬೇಕು ಎಂದು ಕರ್ಣ ಮನವಿ ಮಾಡಿದ್ದಾರೆ.
ನೇಪಾಳದ ಮಾಜಿ ರಾಯಭಾರಿಯೊಂದಿಗೆ ಅಲ್ಲಿನ ಸಂಸತ್ ನ ಮಾಜಿ ಸಭಾಧ್ಯಕ್ಷ ದಮನ್ ನಾಥ್, ಮದೇಶಿ ಸಮುದಾಯದ ಕಾರ್ಯಕರ್ತ ತುಲಾ ನಾರಾಯಣ ಶಾ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹಾಗೂ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.