ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಕ್ರಿಶ್ಚಿಯನ್ ಘಟಕ
ಸ್ಥಾಪನೆಯ ನಿರ್ಧಾರ ಚರ್ಚ್ ಗಳಲ್ಲಿ ಭಿನ್ನಾಭಿಪ್ರಾ ಮೂಡಲು ಕಾರಣವಾಗಿದೆ. ಕ್ರಿಶ್ಚಿಯನ್ ಘಟಕ ಸ್ಥಾಪನೆ ಮಾಡುವುದರ ಸಂಬಂಧ ಆರ್ ಎಸ್ಎಸ್ ನಾಯಕರು ಕ್ರೈಸ್ತ ನಾಯಕರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದು, ಆರ್ ಎಸ್ ಎಸ್ ನಲ್ಲಿ ಕ್ರಿಶ್ಚಿಯನ್ ಘಟಕ ಸ್ಥಾಪನೆ ವಿಷಯ ಚರ್ಚ್ ಗಳನ್ನು ಇಬ್ಭಾಗ ಮಾಡಿದೆ.
ಆರ್ ಎಸ್ಎಸ್ ನಲ್ಲಿ ಕ್ರಿಶ್ಚಿಯನ್ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಚರ್ಚಿಸಲು ಜಾನ್ ದಯಾಳ್ ನೇತೃತ್ವದ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫೆ.13 ಕ್ಕೆ ಸಭೆಯೊಂದನ್ನು ಏರ್ಪಡಿಸಿತ್ತು, ಈ ಸಭೆಯಲ್ಲಿ ಭಾಗವಹಿಸಲು ಭಾರತದ ಕ್ಯಾಥೊಲಿಕ್ ಬಿಶಪ್ಸ್ ಕಾನ್ಫರೆನ್ಸ್(ಸಿಬಿಸಿಐ) ನಿರಾಕರಿಸಿದೆ.
ಸಭೆಯಲ್ಲಿ ಭಾಗವಹಿಸುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಬಿಸಿಐ ವಕ್ತಾರ ಫಾದರ್ ಗ್ಯಾನ್ ಪ್ರಕಾಶ್ ಟೊಪ್ನೊ, ಕ್ರೈಸ್ತ ಘಟಕ ಸ್ಥಾಪನೆ ಬಗ್ಗೆ ಆರ್ ಎಸ್ಎಸ್ ನಿಂದ ನಮಗಿನ್ನೂ ಅಧಿಕೃತ ಆಹ್ವಾನ ಬಂದಿಲ್ಲ ಆದ್ದರಿಂದ ಆಹ್ವಾನ ಬರುವುದಕ್ಕೂ ಮುನ್ನವೇ ಅಕಾಲಿಕವಾಗಿ ಏಕೆ ಆ ಬಗ್ಗೆ ಚರ್ಚೆ ನಡೆಸಬೇಕು ಎಂದು ಪ್ರಶ್ನಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಲು ಕ್ಯಾರ್ಥೋಲಿಕ್ ಬಿಶಪ್ಸ್ ಕಾನ್ಫರೆನ್ಸ್(ಸಿಬಿಸಿಐ) ನಿರಾಕರಿಸಿದ್ದರೂ, ಕ್ರೈಸ್ತ ಧರ್ಮದ ಅನೇಕ ಸ್ವಾಯತ್ತ ಸಂಸ್ಥೆಗಳು, ಉತ್ತರ ಭಾರತದ ಅನೇಕ ಬಿಷಪ್ ಗಳು ಹಾಗೂ ಪಾದ್ರಿಗಳು ಆರ್ ಎಸ್ ಎಸ್ ನಲ್ಲಿ ಕ್ರಿಶ್ಚಿಯನ್ ಘಟಕ ಸ್ಥಾಪನೆ ಕುರಿತಾದ ಸಭೆಯಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸುವುದು ಬಿಡುವುದು ಕ್ಯಾಥೊಲಿಕ್ ಬಿಶಪ್ಸ್ ಕಾನ್ಫರೆನ್ಸ್ ಗೆ ಬಿಟ್ಟ ವಿಚಾರ, ಈ ಸಭೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಭೆಯ ಆಯೋಜಕರಲ್ಲಿ ಒಬ್ಬರಾದ ಎಸಿ ಮಿಚೆಲ್ ತಿಳಿಸಿದ್ದಾರೆ. ಆರ್ ಎಸ್ ಎಸ್ ಯೋಜನೆ ಬಗ್ಗೆ ಕ್ಯಾಥೋಲಿಕ್ ಗಳು ಆಸಕ್ತಿ ತೋರದೆ ಇದ್ದರು, ಉತ್ತರ ಭಾರತದ ಅನೇಕ ಬಿಷಪ್ ಗಳು ಈ ಬಗ್ಗೆ ಉತ್ಸುಕರಾಗಿದ್ದಾರೆ.