ಭೋಪಾಲ್: ಮಧ್ಯ ಪ್ರದೇಶ ರಾಜ್ಯದ ಪ್ರಜೆಗಳ ಸೌಖ್ಯಕ್ಕಾಗಿ ಶಿವರಾಜ್ ಸಿಂಗ್ ಚೌಹ್ವಾಣ್ ನೇತೃತ್ವದ ಬಿಜೆಪಿ ಸರ್ಕಾರ "ಸುಖ-ಸಂತೋಷ ಸಚಿವಾಲಯ" ಎಂಬ ಹೆಸರಲ್ಲಿ ನೂತನ ಇಲಾಖೆಯನ್ನೇ ಸೃಷ್ಟಿ ಮಾಡಲು ಮುಂದಾಗಿದೆ.
ಒತ್ತಡ ನಿವಾರಣೆಗಾಗಿ ನಾಗರಿಕರಲ್ಲಿ ಯೋಗ, ಆಧ್ಯಾತ್ಮ ಮತ್ತು ಧ್ಯಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಧ್ಯ ಪ್ರದೇಶ ಸರ್ಕಾರ "ಸಂತೋಷ ಸಚಿವಾಲಯ" ಎಂಬ ಹೆಸರಲ್ಲಿ ಹೊಸ ಇಲಾಖೆಯ ರಚನೆಗೆ ಮುಂದಾಗಿದೆ. ಈ ಸಂತೋಷ ಸಚಿವಾಲಯದ ಮುಖಾಂತರ ಹಲವು ಸಾಮಾಜಿಕ ಸೇವೆಗಳಿಗೆ ಮಧ್ಯ ಪ್ರದೇಶ ಸರ್ಕಾರ ಮುಂದಾಗುವುದಾಗಿ ತಿಳಿಸಿದ್ದು, ಈ ಪೈಕಿ ಹಜ್ ಯಾತ್ರೆ, ಅಮರನಾಥ ಯಾತ್ರೆಯಂತಹ ಹಿರಿಯ ನಾಗರಿಕರ ಧಾರ್ಮಿಕ ಯಾತ್ರೆಗಳು ಕೂಡ ಸೇರಿದೆ ಎಂದು ತಿಳಿದುಬಂದಿದೆ.
2014-2015ರಲ್ಲಿಯೇ ಮಧ್ಯ ಪ್ರದೇಶ ಸರ್ಕಾರದಿಂದ ಇಂತಹುದೊಂದು ಪ್ರಸ್ತಾವನೆ ಬಂದಿತ್ತಾದರೂ, ಹೈಕಮಾಂಡ್ ನಿಂದ ಇದಕ್ಕೆ ಅನುಮೋದನೆ ದೊರೆತಿರಲಿಲ್ಲ. ಇದೀಗ ಮತ್ತೆ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ನೇತೃತ್ವದ ಮಧ್ಯ ಪ್ರದೇಶ ಸರ್ಕಾರ "ಸಂತೋಷ ಸಚಿವಾಲಯ" ರಚನೆಯ ಪ್ರಸ್ತಾವನೆಯನ್ನು ಹಿಡಿದು ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. ಮೂಲಗಳ ಪ್ರಕಾರ ಇಂದು ಸಂಜೆ ಅಥವಾ ನಾಳೆ ಶಿವರಾಜ್ ಸಿಂಗ್ ಚೌಹ್ವಾಣ್ ನೇತೃತ್ವದ ತಂಡ ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಿ ಸಚಿವಾಲಯ ರಚನೆ ಕುರಿತಂತೆ ಚರ್ಚಿಸಲಿದ್ದಾರೆ.
ಇದಕ್ಕೂ ಮೊದಲು ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕರಾದ ವಿನಯ್ ಸಹಸ್ತ್ರಬುದ್ಧೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಂದಕುಮಾರ್ ಚೌಹ್ವಾಣ್ ರೊಂದಿಗೆ ಶಿವರಾಜ್ ಸಿಂಗ್ ಚೌಹ್ವಾಣ್ ಅವರು ಚರ್ಚೆ ನಡೆಸಿದ್ದು, ಸಚಿವಾಲಯ ರಚನೆಗೆ ರಾಜ್ಯ ಘಟಕದಿಂದ ಅನುಮೋದನೆ ದೊರೆತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಅವರು, "ರಾಜ್ಯದ ಪ್ರಜೆಗಳ ಸಂತೋಷ ಮತ್ತು ಸಹನೆ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಪ್ರಜೆಗಳು ಸಂತೋಷವಾಗಿರಲು ಮತ್ತು ಒತ್ತಡ ನಿವಾರಣೆಗೆ ಬೇಕಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ. ಇದಕ್ಕಾಗಿ ಮನಃಶಾಸ್ತ್ರಜ್ಞರ ಸಲಹೆ ಮತ್ತು ಸೇವೆಯನ್ನು ಕೂಡ ಪಡೆಯಲಾಗುತ್ತದೆ" ಎಂದು ಹೇಳಿದ್ದಾರೆ.
ಒಂದು ವೇಳೆ ಶಿವರಾಜ್ ಸಿಂಗ್ ಚೌಹ್ವಾಣ್ ಅವರ ಈ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಅನುಮೋದನೆ ನೀಡಿದ್ದೇ ಆದರೆ "ಸಂತೋಷ ಸಚಿವಾಲಯ" ಹೆಸರಲ್ಲಿ ಇಲಾಖೆ ಹೊಂದಿದೆ ವಿಶ್ವದ ಮೂರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ಈಗಾಗಲೇ ಯುಎಇ ಮತ್ತು ಬೂತಾನ್ ದೇಶಗಳು ತಮ್ಮ ಪ್ರಜೆಗಳ ಸಂತೋಷವನ್ನು ಅಳೆಯುವ ಸಲುವಾಗಿ ಮತ್ತು ಅದರ ಅಭಿವೃದ್ಧಿಗಾಗಿ "ಸಂತೋಷ ಇಲಾಖೆ"ಯನ್ನು ರಚಿಸಿಕೊಂಡಿವೆ.
ಬಡತನ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳ ಪೈಕಿ ಮಧ್ಯ ಪ್ರದೇಶ ರಾಜ್ಯ ಕೂಡ ಒಂದಾಗಿದ್ದು, ರೈತರ ಮತ್ತು ವಿದ್ಯಾರ್ಥಿಗಳ ಆತ್ಯಹತ್ಯೆ ಪಟ್ಟಿಯಲ್ಲೂ ಮಧ್ಯ ಪ್ರದೇಶ ಸರ್ಕಾರದ ಹೆಸರಿದೆ. ಇದಷ್ಟೇ ಅಲ್ಲದೇ ಶಿಶು ಮರಣ ಪ್ರಮಾಣ ಮತ್ತು ಅತ್ಯಾಚಾರ ಪ್ರಕರಣಗಳು ಕೂಡ ಮಧ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಜನರ ಈ ಮನೋ ವೈಕಲ್ಯ ನಿವಾರಣೆಗೆ ಮುಂದಾಗಿರುವ ಸರ್ಕಾರ "ಸಂತೋಷ ಇಲಾಖೆ"ಯ ರಚನೆಗೆ ಮುಂದಾಗಿದೆ.