ದೇಶ

ಹರ್ಯಾಣ: ಶಾಲಾ ಪಠ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಗ್ರಂಥಗಳ ಬೋಧನೆ ಅಳವಡಿಕೆ

Srinivas Rao BV

ಚಂಡೀಗಢ: ವಿವಿಧ ಧರ್ಮಗಳ ಪವಿತ್ರ ಗ್ರಂಥಗಳಿಂದ ಆಯ್ದ ಅಂಶಗಳನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲು ಹರ್ಯಾಣ ಸರ್ಕಾರ ಮುಂದಾಗಿದೆ. ಈ ತಿಂಗಳಿನಿಂದ ಪಠ್ಯ ಕ್ರಮದಲ್ಲಿ ಪವಿತ್ರಗ್ರಂಥಗಳ ಅಂಶಗಳನ್ನು ಶಾಲೆಗಳಲ್ಲಿ ಬೋಧನೆ ಮಾಡಲಾಗುತ್ತದೆ ಎಂದು ಹರ್ಯಾಣ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಹೇಳಿದ್ದಾರೆ.

ನೈತಿಕ ಶಿಕ್ಷಣದ ಭಾಗವಾಗಿ ಭಗವದ್ಗೀತೆ, ಕುರಾನ್, ಬೈಬಲ್, ಗುರುಗ್ರಂಥ ಸಾಹಿಬ್ ಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು ಜು.5 ರಂದು ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪವಿತ್ರ ಗ್ರಂಥಗಳ ಅಂಶಗಳನ್ನು ಅಳವಡಿಸಲಾಗಿರುವ ಶಾಲಾ ಪಠ್ಯಪುಸ್ತಕಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ.

6 ನೇ ತರಗತಿಯಿಂದ 12 ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಒಂದು ವಿಷಯವನ್ನಾಗಿ ಬೋಧಿಸಲಾಗುತ್ತದೆ ಎಂದು ರಾಮ್ ಬಿಲಾಸ್ ಶರ್ಮಾ ತಿಳಿಸಿದ್ದಾರೆ. ಎಲ್ಲಾ ಧರ್ಮಗಳ ಪವಿತ್ರಗ್ರಂಥಗಳು ವ್ಯಕ್ತಿತ್ವ ವಿಕಸನದ ಉದ್ದೇಶವನ್ನು ಪ್ರಧಾನವಾಗಿರಿಸಿಕೊಂಡಿವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಕುರಾನ್, ಬೈಬಲ್,  ಗುರುಗ್ರಂಥ ಸಾಹಿಬ್ ಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಬೋಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
    
ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಸಂಘ-ಸಂಸ್ಥೆಗಳೊಂದಿಗೆ ಸೇರಿ ವಿವಿಧ ಧರ್ಮಗಳ ಪವಿತ್ರ ಗ್ರಂಥಗಳ ಉಪದೇಶಗಳನ್ನು ಹೊಂದಿರುವ ಪಠ್ಯಪುಸ್ತಕವನ್ನು ತಯಾರಿಸಲಾಗಿದೆ. ಕಳೆದ ವರ್ಷ ಭಗವದ್ಗೀತೆಯನ್ನು ಶಾಲಾ ಪಠ್ಯ ಕ್ರಮದಲ್ಲಿ ಬೋಧಿಸುವ ಹರ್ಯಾಣ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿ, ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

SCROLL FOR NEXT