ಚೆನ್ನೈ: ಎಂತೆಂಥ ವಿಕೃತ ಮನಸ್ಥಿತಿಗಳು ನಮ್ಮ ನಡುವೆ ಇರುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದ್ದು, ಜೀವಂತ ನಾಯಿಯೊಂದನ್ನು ವ್ಯಕ್ತಿಯೊಬ್ಬ ಮಹಡಿ ಮೇಲೆ ಕರೆದೊಯ್ದು ಕೆಳಕ್ಕೆ ಬಿಸಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಗೌತಮ್ ಸುದರ್ಶನ್ ಎಂಬಾತನೇ ಈ ಕೃತ್ಯ ಎಸಗಿದ್ದು, ಈತನ ಸ್ನೇಹಿತ ನಾಯಿಯನ್ನು ಎಸೆಯುವ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ನಾಯಿಯನ್ನು ಮೇಲಿಂದ ಎಸೆಯಲೆಂದೇ ಕಟ್ಟಡದ ಮೂರನೇ ಮಹಡಿಗೆ ನಾಯಿಯನ್ನು ತೆಗೆದುಕೊಂಡು ಹೋದ ಸುದರ್ಶನ್, ತನ್ನ ಸ್ನೇಹಿತ ಮೊಬೈಲ್ ನಲ್ಲಿ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು ನಾಯಿಯನ್ನು ಕೆಳಕ್ಕೆ ಎಸೆದಿದ್ದಾನೆ.
ನಾಯಿಯ ಕತ್ತಿನ ಚರ್ಮ ಹಿಡಿದುಕೊಂಡು ಕಟ್ಟಡದ ಮೇಲ್ಭಾಗಕ್ಕೆ ಒಯ್ದು ಸುದರ್ಶನ್ ಅಲ್ಲಿಂದ ಅದನ್ನು ಕೆಳಕ್ಕೆ ಎಸೆದಿದ್ದನು. ಮೇಲಿನಿಂದ ಬೀಳುವಾಗ ನಾಯಿ ಜೋರಾಗಿ ಕಿರುಚುತ್ತಿತ್ತಾದರೂ, ಕೆಳಕ್ಕೆ ಬೀಳುತ್ತಿದ್ದಂತೆ ಕಿರುಚುವುದನ್ನು ನಿಲ್ಲಿಸಿತು. ಈ ವಿಡಿಯೋವನ್ನು ಆತನ ಸ್ನೇಹಿತ ಆಶಿಶ್ ಪಾಲ್ ಎಂಬಾತ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನಾಯಿಯನ್ನು ಎಸೆದ ಸುದರ್ಶನ್ ಹಾಗೂ ವಿಡಿಯೊ ಚಿತ್ರೀಕರಿಸಿದ ಆತನ ಸ್ನೇಹಿತ ಆಶಿಶ್ ಪಾಲ್ ಎಂಬಾತನ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಅಲ್ಲದೆ ಇವರ ವಿರುದ್ಧ ಕುಂದ್ರಥೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ನಾಯಿ ಎಸೆದ ಸುದರ್ಶನ್ ಹಾಗೂ ವಿಡಿಯೋ ಚಿತ್ರೀಕರಿಸಿದ ಆಶಿಶ್ ಪಾಲ್ ನಾಪತ್ತೆಯಾಗಿದ್ದಾರೆ.
ಅದೃಷ್ಟವಶಾತ್ ಬದುಕುಳಿದ ನಾಯಿ
ಮಹಡಿ ಮೇಲಿಂದ ಕೆಳಕ್ಕೆ ಬೀಳುತ್ತಿದಂತೆಯೇ ನಾಯಿ ಕಿರುಚುವುದನ್ನು ನಿಲ್ಲಿಸಿತ್ತು. ಹೀಗಾಗಿ ಬಹುಶಃ ನಾಯಿ ಸತ್ತಿದೆ ಎಂದೇ ಎಲ್ಲರೂ ಭಾವಿಸಿದ್ದರು. ಇದೀಗ ಕೆಳಕ್ಕೆ ಬಿದ್ದ ನಾಯಿ ಬದುಕಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಶ್ರವಣ್ ಕಿಶೋರ್ ಎಂಬಾತ ನಾಯಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮೂಲಗಳ ಪ್ರಕಾರ ನಾಯಿ ಸ್ಥಿತಿ ಗಂಭೀರವಾಗಿದ್ದು, ಕಾಲುಗಳು ಮುರಿದಿದೆ ಎಂದು ಹೇಳಲಾಗುತ್ತಿದೆ.