ದೇಶ

ಜಾವ್ಡೇಕರ್ ಗೆ ಅಧಿಕಾರ ಹಸ್ತಾಂತರ ಮಾಡುವ ಕಾರ್ಯಕ್ರಮಕ್ಕೆ ಸ್ಮೃತಿ ಇರಾನಿ ಗೈರು

Srinivas Rao BV

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿ ಪ್ರಕಾಶ್ ಜಾವ್ಡೇಕರ್ ಅಧಿಕಾರ ವಹಿಸಿಕೊಂಡಿದ್ದು, ಅಧಿಕಾರ ಹಸ್ತಾಂತರ ಮಾಡಬೇಕಿದ್ದ ನಿರ್ಗಮಿತ ಸಚಿವೆ ಸ್ಮೃತಿ ಇರಾನಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

ಜವಳಿ ಖಾತೆ ನೀಡಿರುವುದಕ್ಕೆ ಸ್ಮೃತಿ ಇರಾನಿ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳನ್ನು ಸಚಿವೆ ತಿರಸ್ಕರಿಸಿದ್ದರಾದರೂ ಪ್ರಕಾಶ್ ಜಾವಡೇಕರ್ ಅವರು ಸ್ಮೃತಿ ಇರಾನಿಗೆ ಎರಡು ಬಾರಿ ಕರೆ ಮಾಡಿದ ಹೊರತಾಗಿಯೂ ಸ್ಮೃತಿ ಇರಾನಿ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿರ್ಗಮಿತ ಸಚಿವರು ತಮ್ಮ ಇಲಾಖೆಗೆ ನೂತನವಾಗಿ ನೇಮಕವಾಗಿರುವ ಸಚಿವರಿಗೆ ಅಧಿಕಾರ ಹಸ್ತಾಂತರಿಸುವುದು ಸಂಪ್ರದಾಯವಾಗಿದ್ದು, ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಳಿಕ ಇಲಾಖೆಗಳಿಗೆ ನೂತನವಾಗಿ ನೇಮಕವಾಗಿರುವ ಸಚಿವರು ಈ ಹಿಂದೆ ಅದೇ ಇಲಾಖೆಯನ್ನು ನಿರ್ವಹಿಸುತ್ತಿದ್ದ ಸಚಿವರೊಂದಿಗೆ ತೆರಳಿ ಅಧಿಕಾರ ಸ್ವೀಕರಿಸಿದ್ದಾರೆ. ಎಲ್ಲರಂತೆ ಪ್ರಕಾಶ್ ಜಾವ್ಡೇಕರ್ ತಾವು ಈ ಹಿಂದೆ ನಿರ್ವಹಿಸುತ್ತಿದ್ದ ಪರಿಸರ ಖಾತೆಗೆ ನೂತನವಾಗಿ ನೇಮಕವಾಗಿರುವ ಸಚಿವ ಅನಿಲ್ ಮಾಧವ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ಆದರೆ ಜಾವ್ಡೇಕರ್  ಮಾತ್ರ ಮಾನವ ಸಂಪನ್ಮೂಲ ಇಲಾಖೆಯ ನಿರ್ಗಮಿತ ಸಚಿವರಿಲ್ಲದೆ ಹಾಗೆಯೇ ಅಧಿಕಾರ ವಹಿಸಿಕೊಂಡಿದ್ದಾರೆ. ಸ್ಮೃತಿ ಇರಾನಿ ಗೈರು ಹಾಜರಾಗಿರುವುದನ್ನು ಸಮರ್ಥಿಸಿಕೊಂಡಿರುವ ಪ್ರಕಾಶ್ ಜಾವ್ಡೇಕರ್, ಕೌಟುಂಬಿಕ ಕಾರಣಗಳಿಂದ ಸ್ಮೃತಿ ಇರಾನಿ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.   

SCROLL FOR NEXT