ನವದೆಹಲಿ: 1975 ರಲ್ಲಿ ಜಾರಿಯಾಗಿದ್ದ ತುರ್ತುಪರಿಸ್ಥಿತಿಯ ಬಗ್ಗೆ ಅಧ್ಯಾಯವೊಂದನ್ನು ಶಾಲಾಪಠ್ಯ ಕ್ರಮದಲ್ಲಿ ಅಳವಡಿಸಬೇಕು ಎಂದು ಆರ್ ಎಸ್ ಎಸ್ ನ ನಿಯತಕಾಲಿಕೆ ಆರ್ಗನೈಜರ್ ಅಭಿಪ್ರಾಯಪಟ್ಟಿದೆ.
ಮುಂದಿನ ಪೀಳಿಗೆಗೆ ತುರ್ತುಪರಿಸ್ಥಿತಿಯ ಬಗ್ಗೆ ಹಾಗೂ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದ ಬಗ್ಗೆ ತಿಳುವಳಿಕೆ ನೀಡಲು ಶಾಲಾ ಪಠ್ಯಗಳಲ್ಲಿ ತುರ್ತುಪರಿಸ್ಥಿತಿಯ ಬಗ್ಗೆಯೇ ಪ್ರತ್ಯೇಕವಾದ ಅಧ್ಯಾಯವನ್ನು ಅಳವಡಿಸುವುದು ಅಗತ್ಯ ಎಂದು ಅರ್ಜನೈಜರ್ ಅಭಿಪ್ರಾಯಪಟ್ಟಿದೆ.
ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಯ ಬಳಿಕ ನಡೆದ ಮೊದಲ ಸಾರ್ವಜನಿಕ ಚಳುವಳಿ ಎಂದರೆ ಅದು ತುರ್ತು ಪರಿಸ್ಥಿತಿಯ ವೇಳೆಯಲ್ಲಿ ನಡೆದ ಚಳುವಳಿಯಾಗಿದೆ. ಒಂದು ರಾಜಕೀಯ ಪಕ್ಷ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲು ಏನೆಲ್ಲಾ ಮಾಡಿತ್ತು ಎಂಬುದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವೊಂದು ಹೇಳಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕಪ್ಪು ಚುಕ್ಕೆಯಷ್ಟೇ ಅಲ್ಲದೆ ಅಧಿಕಾರದ ದಾಹದಿಂದ ಎಸಗಿದ ಕ್ರಿಮಿನಲ್ ಅಪರಾಧವಾಗಿದೆ. ದೇಶವನ್ನು ತುರ್ತುಪರಿಸ್ಥಿತಿಯ ಅಂಧಕಾರಕ್ಕೆ ತಳ್ಳಿದವರು ದೇಶದ ಕ್ಷಮೆ ಯಾಚಿಸಬೇಕು. ಅಷ್ಟೇ ಅಲ್ಲದೆ ತುರ್ತು ಪರಿಸ್ಥಿತಿಯ ವಿರುದ್ಧ ಸಾರ್ವಜನಿಕ ಚಳುವಳಿಯನ್ನು ಮುನ್ನಡೆಸಿದ ಜಯಪ್ರಕಾಶ್ ನಾರಾಯಣ್ ಅವರ ಜೀವನ ಹಾಗೂ ಹೋರಾಟದ ಬಗ್ಗೆ ಯುವಜನತೆಗೆ ಬೋಧನೆ ಮಾಡುವ ಅಗತ್ಯವಿದೆ ಎಂದು ಆರ್ಗನೈಜರ್ ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಆಗ್ರಹಿಸಲಾಗಿದೆ.