ಲಖನೌ: ಬಾಂಗ್ಲಾದಲ್ಲಿ ದಾಳಿ ನಡೆಸಿ 20 ಜನರನ್ನು ಹತ್ಯೆ ಮಾಡಿದ್ದ ಉಗ್ರರಿಗೆ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಪ್ರೇರಣೆಯಾಗಿದ್ದ ಎಂಬ ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶದ ಇಸ್ಲಾಮ್ ಧಾರ್ಮಿಕ ಮುಖಂಡರು, ಜಾಕಿರ್ ನಾಯಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ.
ಉಗ್ರರಿಗೆ ಸ್ಫೂರ್ತಿಯಾಗಿರುವ ಜಾಕಿರ್ ನಾಯಕ್ ಹಾಗೂ ಆತನ ಭಾಷಣಗಳು ಪ್ರಸಾರವಾಗುವ ಪೀಸ್ ಟಿವಿ ಚಾನಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಬರೇಲಿಯ ಬರೇಲ್ವಿ ಮೌಲ್ವಿಗಳು ಆಗ್ರಹಿಸಿದ್ದು ಪೀಸ್ ಚಾನಲ್ ನ್ನು ನಿಷೇಧಿಸಬೇಕು ಎಂದು ಕರೆ ನೀಡಿದ್ದಾರೆ.
"ಬಾಂಗ್ಲಾದಲ್ಲಿ ದಾಳಿ ನಡೆಸಿದ ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದ ಎಂಬ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಜಾಕಿರ್ ನಾಯಕ್ ನ ಭಾಷಣಗಳು ಉಗ್ರವಾದಕ್ಕೆ ಪ್ರೇರಣೆ ನೀಡುತ್ತಿದ್ದವು ಎಂದು ಹೇಳಲಾಗಿದೆ, ಈ ಹಿನ್ನೆಲೆಯಲ್ಲಿ ಜಾಕಿರ್ ನಾಯಕ್ ನ್ನು ತಕ್ಷಣವೇ ಬಂಧಿಸಿ ಪೀಸ್ ಟಿವಿಯನ್ನು ನಿಷೇಧಿಸಬೇಕು ಎಂದು ಮೌಲಾನಾ ಶಹಬುದ್ಧಿನ್ ರಾಜ್ವಿ ಹೇಳಿದ್ದಾರೆ. ಜಾಕಿರ್ ನಾಯಕ್ ನ ಚಟುವಟಿಕೆಗಳು ಇಸ್ಲಾಮ್ ಹಾಗೂ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದಾಗಿದ್ದು 2008 ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಜಾಕಿರ್ ನಾಯಕ್ ನ ಕಾರ್ಯಕ್ರಮಗಳನ್ನು ನಿಷೇಧಿಸಿತ್ತು ಎಂದು ಮೌಲ್ವಿಗಳು ತಿಳಿಸಿದ್ದಾರೆ.