ದೇಶ

ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಪ್ರತಿಭಟನೆ: ಅಸುನೀಗಿದವರ ಸಂಖ್ಯೆ 8ಕ್ಕೇರಿಕೆ

Sumana Upadhyaya
ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಕಮಾ೦ಡರ್ ಬುರ್ಹಾನ್ ಮುಜಾಫರ್ ವಾನಿ ಹತ್ಯೆಯನ್ನು ಪ್ರತಿಭಟಿಸಿ ನಡೆದ ಘರ್ಷಣೆಯಲ್ಲಿ ಸಾವಿಗೀಡಾದ ನಾಗರಿಕರ ಸಂಖ್ಯೆ 8ಕ್ಕೇರಿದೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇಂದು ಬುರ್ಹನ್ ವಾನಿಯ ಅಂತ್ಯಸಂಸ್ಕಾರ ಮುಗಿದ ಮೇಲೆ ಪ್ರತಿಭಟನಾಕಾರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲು ಆರಂಭಿಸಿದರು. ಅಲ್ಲದೆ ಕುಲ್ಗಾಮ್ ಪ್ರದೇಶದಲ್ಲಿ ಬಿಜೆಪಿ ಕಚೇರಿಯನ್ನು ಹಾನಿಗೊಳಿಸಿದರು. ಹಿಂಸಾಚಾರ ನಂತರ ಸುತ್ತಮುತ್ತ ಹಬ್ಬಿ ಪ್ರತಿಭಟನಾನಿರತ ಗುಂಪು ಅಚಬಲ್ ಮತ್ತು ದಮ್ ಹಾಲ್ ಹಂಜಿಪೊರಾದ ಪೊಲೀಸ್ ಠಾಣೆಗೆ ಮತ್ತು ಖಾಜಿಗುಂಗ್ ನ ಕುಂದ್ ನಲ್ಲಿರುವ ಪೊಲೀಸ್ ಪೋಸ್ಟ್ ಗೆ ಬೆಂಕಿ ಹಚ್ಚಿದರು. ಇತರ ಎರಡು ಸರ್ಕಾರಿ ಕಚೇರಿಗಳಿಗೂ ಬೆಂಕಿ ಹಚ್ಚಲಾಯಿತು.
21 ವರ್ಷದ ಬುರ್ಹಾನ್ ಮುಜಾಫರ್ ವಾನಿ ಮತ್ತು ಆತನ ಇಬ್ಬರು ಸಹಚರರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ  ಯೋಧರು ಕೊಂದುಹಾಕಿದ್ದರು. ಬುರ್ಹಾನ್ ಉಗ್ರವಾದಿ ಸಂಘಟನೆಗೆ ಸೇರಿದ್ದು 2010ರಲ್ಲಿ 15 ವರ್ಷದವನಿದ್ದಾಗ, 10ನೇ ತರಗತಿಯಲ್ಲಿ ಓದುತ್ತಿದ್ದಾಗ. 
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪಟ್ಟಣದವನಾದ ಬುರ್ಹಾನ್ ಸಾಮಾಜಿಕ ತಾಣವನ್ನು ಯುವಕರನ್ನು ಉಗ್ರವಾದಕ್ಕೆ ಸೆಳೆಯಲು ಬಳಸುತ್ತಿದ್ದನು. ಅವನ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದ್ದ. ಕಳೆದೆರಡು ವರ್ಷಗಳಲ್ಲಿ ಸುತ್ತಮುತ್ತಲ 60 ಯುವಕರು ಉಗ್ರಗಾಮಿಗಳ ಗುಂಪಿಗೆ ಸೇರಿದ್ದರು. ಕಾಶ್ಮೀರದ ಜನತೆಗೆ ವಾಟ್ಸಾಪ್ ಮತ್ತು ಇತರ ಸಾಮಾಜಿಕ ತಾಣದ ಮೂಲಕ ಬೆದರಿಕೆಯೊಡ್ಡುತ್ತಿದ್ದನು.
SCROLL FOR NEXT