ಅನಂತ್ ನಾಗ್: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಗೆರಿಲ್ಲಾ ಪಡೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ರೂಪದ ಹಿಂಸಾಚಾರಕ್ಕೆ ತಿರುಗಿದ್ದು, ಭಾನುವಾರ ನಡೆದ ಗಲಭೆಯಲ್ಲಿ ಉದ್ರಿಕ್ತರ ಗುಂಪು ಸೇನಾ ವಾಹನವನ್ನೇ ಜಖಂಗೊಳಿಸಿ ನದಿಗೆ ತಳ್ಳಿದ್ದಾರೆ.
ಅನಂತ್ ನಾಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಲ್ಲು ತೂರಾಟ ನಡೆಸುತ್ತಿರುವ ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲು ಪೊಲೀಸರು ಹಿಂದಕ್ಕೆ ಸರಿಯುತ್ತಿದ್ದಂತೆಯೇ ಉದ್ರಿಕ್ತರ ಗುಂಪೊಂದು ನೋಡ-ನೋಡುತ್ತಿದ್ದಂತೆಯೇ ಬುಲೆಟ್ ಪ್ರೂಫ್ ಸೇನಾವಾಹನವನ್ನು ಸುತ್ತುವರೆದು ಮನಸೋ ಇಚ್ಛೆ ವಾಹನವನ್ನು ಜಖಂಗೊಳಿಸಿದ್ದಾರೆ. ಅಲ್ಲದೆ ಸೇನಾ ವಾಹನದ ಮೇಲ್ಚಾವಣಿ ಕಿತ್ತೆಸೆದು ಅದನ್ನು ಉರುಳಿಸಿಕೊಂಡು ಹೋಗಿ ಸಮೀಪದಲ್ಲೇ ಇದ್ದ ಸಟ್ಲೇಜ್ ನದಿಗೆ ಹಾಕಿದ್ದಾರೆ.
ಈ ವೇಳೆ ಸೇನಾ ವಾಹನದ ಚಾಲಕ ಮತ್ತು ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪುಲ್ವಾಮದಲ್ಲಿ ಮತ್ತೊಂದು ಘರ್ಷಣೆಯಲ್ಲಿ ಪೊಲೀಸರ ಗುಂಡಿಗೆ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಕಾಶ್ನೀರ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೇರಿದೆ. ಇಂದು ಬೆಳಗ್ಗೆಯಷ್ಟೇ 18 ವರ್ಷದ ಇರ್ಫಾನ್ ಅಹ್ಮದ್ ಮಲ್ಲಿಕ್ ಎಂಬ ಯುವಕ ಸಾವನ್ನಪ್ಪಿದ್ದ. ಇದೀಗ ಮತ್ತೆ ಮೂವರು ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.