ಪಣಜಿ: ವಿವಾದಾತ್ಮಕ ಧರ್ಮ ಪ್ರಚಾರಕ ಜಾಕಿರ್ ನಾಯಕ್ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಬೇಕು ಎಂದು ಕಾಂಗ್ರೆಸ್ ಸಂಸದ ಶಾಂತಾರಾಮ್ ನಾಯಕ್ ಒತ್ತಾಯಿಸಿದ್ದಾರೆ.
ಪಣಜಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ, ಉಗ್ರರಿಗೆ ಉತ್ತೇಜನ ನೀಡುವ ರೀತಿಯಲ್ಲಿ ಭಾಷಣ ಮಾಡುವ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್ ವಿರುದ್ಧ ಇನ್ನೂ ಎಫ್ ಐ ಆರ್ ದಾಖಲಿಸದೆ ಇರುವುದಕ್ಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಜಾಕಿರ್ ನಾಯಕ್ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ಸರಿಯಾದ ತನಿಖೆ ಮಾಡಿದೆಯೋ ಇಲ್ಲವೋ ತಿಳಿಯುತ್ತಿಲ್ಲ. ಒಂದು ವೇಳೆ ತನಿಖೆ ಮಾಡಿದ್ದರೆ ಈ ವೇಳೆಗೆ ಜಾಕಿರ್ ನಾಯಕ್ ವಿರುದ್ಧ ಎಫ್ ಐ ಆರ್ ದಾಖಲಿಸುತ್ತಿತ್ತು ಎಂದು ಶಾಂತಾರಾಮ್ ನಾಯಕ್ ಹೇಳಿದ್ದಾರೆ. ಯಾವುದೇ ಒಂದು ಚಾನಲ್ ಅಥವಾ ಸಂಘಟನೆಯನ್ನು ನಿಷೇಧಿಸುವುದಕ್ಕೆ ಸಾಕಷ್ಟು ಸಮಯ ಹಿಡಿಸುತ್ತದೆ. ಆದರೆ ಒಬ್ಬ ವ್ಯಕ್ತಿಯ ಹೇಳಿಕೆಗಳು ಕೋಮು ಪ್ರಚೋದನೆಕೆ ಕಾರಣವಾಗುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಿ ಎಫ್ಐಆರ್ ದಾಖಲಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಶಾಂತಾರಾಮ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.