ದೇಶ

ಪಠಾಣ್ ಕೋಟ್ ಮಾದರಿಯಲ್ಲಿ ಮತ್ತೆ ಪಂಜಾಬ್ ಮೇಲೆ ದಾಳಿ!

Srinivasamurthy VN

ನವದೆಹಲಿ: ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಲಾಭ ಪಡೆಯಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹವಣಿಸುತ್ತಿದ್ದು, ಇಡೀ ದೇಶದ ಚಿತ್ತ ಕಾಶ್ಮೀರದತ್ತ ನೆಟ್ಟಿದ್ದರೆ, ಇತ್ತ  ಪಂಜಾಬ್ ನಲ್ಲಿ ಉಗ್ರರು ಭಾರಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಗುಪ್ತಚರ ಇಲಾಖೆ ಮೂಲಗಳ ಪ್ರಕಾರ ಪಾಕಿಸ್ತಾನ ಮೂಲದ ಉಗ್ರರು ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬಾ ಗಡಿ ಪ್ರದೇಶದಲ್ಲಿರುವ ಗುರುದಾಸ್ ಪುರ ಜಿಲ್ಲೆ, ಕಥುವಾ ಮತ್ತು ಪಠಾಣ್  ಕೋಟ್ ಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಲಷ್ಕರ್ ಇ ತೊಯ್ಬಾ ಅಥವಾ ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ ನಾಲ್ಕರಿಂದ ಐದು ಮಂದಿ  ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿವೆ. ಈ ಎಲ್ಲ ಉಗ್ರರನ್ನು ಸ್ಲೀಪರ್ ಸೆಲ್ ವತಿಯಿಂದ ಉಗ್ರ ದಾಳಿಗೆ ನೇಮಿಸಿಕೊಳ್ಳಲಾಗಿದ್ದು, ಈ ಎಲ್ಲ ಉಗ್ರರೂ ಪ್ರಸ್ತುತ ಪಾಕಿಸ್ತಾನದ ಚಕ್ ಖಜಿಯಾನ್  ಹಳ್ಳಿಯಲ್ಲಿ ವಾಸವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಚಕ್ ಖಜಿಯಾನ್ ಭಾರತದ ಗಡಿ ಕಾಯುವ ಬಿಎಸ್ ಎಫ್ ಯೋಧರ 132/97 BN BSF ಕಥುವಾ ಸೆಕ್ಟರ್ ಶಿಬಿರಕ್ಕೆ ನೇರವಾಗಿದ್ದು, ಅಲ್ಲಿಂದ ಭಾರತದ ಗಡಿಯಲ್ಲಿನ ಪರಿಸ್ಥಿತಿಗಳನ್ನು  ಬೈನಾಕ್ಯುಲರ್ ಮೂಲಕವಾಗಿ ವೀಕ್ಷಣೆ ಮಾಡಬಹುದಾಗಿದೆ. ಇದೇ ಕಾರಣಕ್ಕೆ ಉಗ್ರರು ಈ ಗ್ರಾಮವನ್ನು ಆರಿಸಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಆದರೆ ಈ ಬಗ್ಗೆ ಪಾಕಿಸ್ತಾನ  ಸೇನೆಗೆ ಎಲ್ಲ ಬಗೆಯ ಮಾಹಿತಿ ಇದ್ದರೂ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಭಾರತದ ಗಡಿ ಮತ್ತು ಚಕ್ ಖಜಿಯಾನ್  ಗ್ರಾಮದ ನಡುವೆ ನದಿ ಹರಿಯುತ್ತಿದ್ದು, ಈ ನದಿಯನ್ನು ದಾಟಿದರೆ ನೇರವಾಗಿ ಭಾರತದ ಪ್ರವೇಶ ಮಾಡಬಹುದಾಗಿದೆ. ಹೀಗಾಗಿ ನದಿ ತಟದಾದ್ಯಂತ  ಭಾರತೀಯ ಯೋಧರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಮತ್ತೊಂದು ಮೂಲಗಳು ತಿಳಿಸಿರುವಂತೆ ಪಾಕಿಸ್ತಾನದ ಚಕ್ ಖಜಿಯಾನ್ ಗ್ರಾಮದಲ್ಲಿ ಅವಿತಿರುವ ಉಗ್ರರು ಭಾರತದ ಗುಜ್ಜರ್  ಡೇರಾಗಳಲ್ಲಿ ವಾಸಿಯಾಗಿರುವ ಓರ್ವ ಏಜೆಂಟ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಗಡಿಯಲ್ಲಿರುವ ತಮ್ಮ ಬೆಂಬಲಿಗರ ಮೂಲಕವಾಗಿ ಗಡಿಯಲ್ಲಿನ  ಸೈನಿಕ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕಿ ತಮಗೆ ನೀಡುವಂತೆ ಕೇಳಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಕಳೆದ ಶುಕ್ರವರವೇ ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ದೆಹಲಿಗೆ ಕರೆಸಿಕೊಂಡು ಸಂಭಾವ್ಯ ದಾಳಿ ತಡೆ ಕುರಿತಂತೆ ಚರ್ಚೆ ನಡೆಸಿದೆ.  ಪ್ರಮುಖವಾಗಿ ಪಂಜಾಬ್ ಮತ್ತು ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೆಚ್ಚುವರಿ ಭದ್ರತೆ ನೀಡುವ ಕುರಿತು ಕೇಂದ್ರ ಸರ್ಕಾರ ಭರವಸೆ ನೀಡಿದೆ.

SCROLL FOR NEXT