ನವದೆಹಲಿ: ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಣಿಪುರಿ ಮಹಿಳೆಗೆ ಕಿರುಕುಳ ನೀಡಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮಹಿಳಾ ಕಾರ್ಯಕರ್ತೆಯೊಬ್ಬರು ಸೋಮವಾರ ಆಗ್ರಹಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಯೋರ್ವರು ವಿಶ್ವ ಮಹಿಳಾ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಸಿಯೋಲ್ ಗೆ ತೆರಳುತ್ತಿದ್ದರು. ಈ ವೇಳೆ ಅಧಿಕಾರಿ ಜನಾಂಗೀಯ ನಿಂದನೆ ಮಾಡಿದ್ದರು ಎಂದು ಮಹಿಳೆ ಆರೋಪಿಸಿದ್ದರು.
ಪ್ರಕರಣದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಬರ್ಖಾ ಶುಕ್ಲಾ ಸಿಂಗ್ ಅವರು, ವಲಸೆ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಶಿಕ್ಷೆ ನೀಡಬೇಕಿದೆ ಎಂದು ಹೇಳಿದ್ದರು.
ರಾಜಧಾನಿ ದೆಹಲಿಯಲ್ಲಿ ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ಅವಮಾನಕರ ವಿಚಾರ. ಅದರಲ್ಲೂ ವಿದ್ಯಾವಂತರು ಈ ರೀತಿಯಾಗಿ ನಡೆದುಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ. ಬಣ್ಣ ಹಾಗೂ ಮುಖ ವಿಭಿನ್ನತೆ ಹೊಂದಿದ ಮಾತ್ರಕ್ಕೆ ಆಕೆ ಭಾರತೀಯಳೇ ಅಲ್ಲ ಎಂದು ಅರ್ಥವಲ್ಲ. ಪ್ರಕರಣ ಸಂಬಂಧ ಸೂಕ್ತ ತನಿಖೆಯಾಗಬೇಕಿದೆ. ಮಹಿಳೆ ಪರವಾಗಿ ನಾನು ನಿಲ್ಲುತ್ತೇವೆಂದು ಹೇಳಿದ್ದಾರೆ.
ಇದರಂತೆ ಮಹಿಳಾ ಕಾರ್ಯಕರ್ತೆ ಕವಿತಾ ಶ್ರೀವಾತ್ಸವರ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ವಲಸೆ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಆತನ ವಿರುದ್ಧ ಚಾರ್ಜ್ ಶೀಟ್ ದಾಖಲಿಸಬೇಕೆಂದು ಹೇಳಿದ್ದಾರೆ.
ಈಶಾನ್ಯ ಭಾಗದವರನ್ನು ಜನರು ಯಾವಾಗಲೂ ಚೀನಿಯರು ಎಂದೇ ಹೇಳುತ್ತಾರೆ. ಮಹಿಳೆ ಭಾರತೀಯಳು ಅಲ್ಲ ಎಂದು ವಲಸೆ ಅಧಿಕಾರಿಯೇ ಹೇಳಿದ ಮೇಲೆ ಆಕೆ ಏನು ಮಾಡುತ್ತಾಳೆ. ಈ ಮಾತನ್ನು ಕೇಳಿದ ಕೂಡಲೇ ಮಹಿಳೆಗೆ ಕೋಪ ಬರುವುದು ಸಹಜವಾಗಿದೆ. ಈ ರೀತಿಯ ವರ್ಣಭೇದ ತಾರತಮ್ಯ ಪ್ರಕರಣವನ್ನು ಸರ್ಕಾರ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕಿದೆ.
ನಾವು ಆಫ್ರಿಕಾದವರನ್ನು ಸಾಯಿಸಿದ್ದೇವೆ. ಇದೇ ರೀತಿಯಲ್ಲಿಯೇ ಮಣಿಪುರಿ ಜನರನ್ನು ನಮ್ಮವರಲ್ಲ ಎನ್ನುವ ಮೂಲಕ ಆಫ್ರಿಕಾದವರೊಂದಿಗೆ ನಡೆದುಕೊಂಡಂತೆ ಇವರ ಬಳಿಯೂ ನಡೆದುಕೊಳ್ಳಲಾಗುತ್ತಿದೆ. ಅವನ್ನು ಒಪ್ಪಿಕೊಳ್ಳದೇ ಇದ್ದರೆ, ಅವರು ಪ್ರತ್ಯೇಕಗೊಳ್ಳುತ್ತಾರೆ. ಪ್ರಕರಣದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾಗೆ ಹೋಗುತ್ತಿದ್ದ ಮಣಿಪುರಿ ಯುವತಿಯಿಂದ ಹೇಳಿಕೆಯನ್ನು ಪಡೆದಿದ್ದೇವೆ. ವಲಸೆ ಅಧಿಕಾರಿ ದುರ್ವತನೆ ತೋರಿರುವ ಕುರಿತಂತೆ ದೆಹಲಿ ವಿಮಾನ ನಿಲ್ದಾಣ ವರದಿ ಸಲ್ಲಿಸಿದೆ. ಮತ್ತಷ್ಟು ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ಕೇಳಲಾಗಿದೆ. ಸಂಪೂರ್ಣ ವರದಿ ಬಂದ ನಂತರ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುತ್ತೇವೆಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಹೇಳಿದ್ದಾರೆ.
ಪ್ರಕರಣ ಕುರಿತಂತೆ ಮಣಿಪುರಿ ಮಹಿಳೆ ಬಳಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕ್ಷಮೆಯಾಚಿಸಿದ್ದಾರೆಂದು ಹೇಳಲಾಗುತ್ತಿದೆ.
ಮೋನಿಯಾ ಖಂಗೆಮ್ಬಮ್ - ಘಟನೆ ಕುರಿತಂತೆ ನಾವು ಕ್ಷಮೆಯಾಚಿಸುತ್ತೇವೆ. ಈ ಬಗ್ಗೆ ನನ್ನ ಹಿರಿಯ ಸಹೋದ್ಯೋಗಿ ಶ್ರೀ ರಾಜನಾಥ್ ಸಿಂಗ್ ಜೀ ಯವರೊಂದಿಗೆ ಮಾತನಾಡಿದ್ದು, ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳನ್ನು ಗುರ್ತಿಸುವಂತೆ ತಿಳಿಸಿದ್ದೇನೆಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.