ದೇಶ

ಪೇಶಾವರ ಉಗ್ರ ದಾಳಿ ರೂವಾರಿ ಉಮರ್ ಮನ್ಸೂರ್ ಡ್ರೋಣ್ ದಾಳಿಗೆ ಬಲಿ

Srinivasamurthy VN

ಇಸ್ಲಾಮಾಬಾದ್: 2014ರ ಪೇಶಾವರ ಆರ್ವಿು ಶಾಲೆಯ ಮೇಲೆ ನಡೆದ ಭೀಕರ ಉಗ್ರ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುತ್ತಿದ್ದ ಉಮರ್ ಮನ್ಸೂರ್ ನನ್ನು ಅಮೆರಿಕದ  ಚಾಲಕ ರಹಿತ ಯುದ್ಧ ವಿಮಾನ ಡ್ರೋನ್ ಹೊಡೆದುರುಳಿಸಿದೆ ಎಂದು ಹೇಳಲಾಗುತ್ತಿದೆ.

ಸೋಮವಾರ ಆಫ್ಘಾನಿಸ್ತಾನದ ನಂಗಾರ್​ಹಾರ್ ಪ್ರಾಂತ್ಯದ ಬಂದಾರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಮರ್ ಮನ್ಸೂರ್ ಸಾವನ್ನಪ್ಪಿದ್ದಾನೆ ಎಂದು ಪಾಕಿಸ್ತಾನದ ಮಾಧ್ಯಮಗಳು  ವರದಿ ಬಿತ್ತರಿಸಿವೆ. ಅಂತೆಯೇ ಡ್ರೋಣ್ ಕಾರ್ಯಾಚರಣೆಯ ವೇಳೆ ಉಗ್ರ ಉಮರ್ ಮನ್ಸೂರ್ ಹತ್ಯೆಯಾಗಿರುವ ಕುರಿತು ಪಾಕಿಸ್ತಾನದ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು  ಖಚಿತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

2014ರ ಡಿಸೆಂಬರ್ 16ರಂದು ಪೇಶಾವರ ಆರ್ವಿು ಶಾಲೆಯಲ್ಲಿ  ನಡೆದ ಭೀಕರ ಉಗ್ರ ದಾಳಿಯಲ್ಲಿ 122 ಮಕ್ಕಳು, 22 ಶಿಕ್ಷಕರು ಸಾವನ್ನಪ್ಪಿದ್ದರು. ಮಕ್ಕಳು ಎಂದೂ ಕೂಡ ನೋಡದೇ ಉಗ್ರರು  ನಡೆಸಿದ ಈ ಪೈಶಾಚಿಕ ಕೃತ್ಯ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಪಾಕಿಸ್ತಾನ, ಭಾರತ ಮತ್ತು ಅಮೆರಿಕ ದೇಶಗಳು ಸೇರಿದಂತೆ ಇಡೀ ವಿಶ್ವಸಮುದಾಯವೇ ಈ ಪೈಶಾಚಿಕ ದಾಳಿ ವಿರುದ್ಧ  ಧ್ವನಿ ಎತ್ತಿದ್ದವು. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಂತೆಯೇ ಉಗ್ರ ದಾಳಿ ರೂವಾರಿ ಉಮರ್ ಮನ್ಸೂರ್ ಪಾಕಿಸ್ತಾನ ತೊರೆದು ಆಫ್ಘಾನಿಸ್ತಾನದಲ್ಲಿ ತಲೆ ಮರೆಸಿಕೊಂಡಿದ್ದ.

ಈದೀಗ ಸೋಮವಾರ ನಡೆದ ಡ್ರೋಣ್ ದಾಳಿಯಲ್ಲಿ ಉಗ್ರ ಉಮರ್ ಮನ್ಸೂರ್ ಹಾಗೂ ಮತ್ತೋರ್ವ ಉಗ್ರ ನಾಯಕ ಖಾರಿ ಸೈಫುಲ್ಲಾ ಸಾವನ್ನಪ್ಪಿದ್ದಾರೆ. ಇನ್ನು ಡ್ರೋಣ್ ದಾಳಿಯಲ್ಲಿ  ಸಾವನ್ನಪ್ಪಿರುವ ಮತ್ತೋರ್ವ ಉಗ್ರ ಕಮಾಂಡರ್ ಸೈಫುಲ್ಲಾ, ಉಗ್ರ ಸಂಘಟನೆಯ ಆತ್ಮಹತ್ಯಾ ದಳದ ಮುಖ್ಯಸ್ಥನಾಗಿದ್ದ ಎಂದು ತಿಳಿದುಬಂದಿದೆ. ಮನ್ಸೂರ್ ಮತ್ತು ಸೈಫುಲ್ಲಾ ಇಬ್ಬರೂ ತೆರೀಕ್  ಐ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ)ದ ತಾರಿಕ್ ಗೀದರ್ ಸಂಘಟನೆಗೆ ಸೇರಿದವರಾಗಿದ್ದು, ಪೇಶಾವರ ದಾಳಿಯಲ್ಲದೇ ಇನ್ನೂ ಕೆಲ ದಾಳಿಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

SCROLL FOR NEXT