ದೇಶ

ಮಹಾರಾಷ್ಟ್ರ ಪೌರ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಎಐಎಂಐಎಂ ಪಕ್ಷಕ್ಕೆ ನಿರ್ಬಂಧ

Manjula VN

ಮುಂಬೈ: ಮಹಾರಾಷ್ಟ್ರ ಪೌರ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷಕ್ಕೆ ಚುನಾವಣಾ ಆಯೋಗವು ಬುಧವಾರ ನಿರ್ಬಂಧ ಹೇರಿದೆ.

ಮಹಾರಾಷ್ಟ್ರ ಪೌರ ಚುನಾವಣೆಯಲ್ಲಿ ಸ್ಥಾನ ಪಡೆಯಲು ಎಐಎಐಎ ಪಕ್ಷ ಪ್ರಯತ್ನಿಸುತ್ತಿದ್ದು, ಈ ಕುರಿತಂತೆ ಸೂಕ್ತ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸದೇ ಇರುವುದೇ ನಿರ್ಬಂಧ ಹೇರಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಮಹಾರಾಷ್ಟ್ರ ಚುನಾವಣಾ ಆಯೋಗವು ಈವರೆಗೂ 191 ಸ್ಥಳೀಯ ರಾಜಕೀಯ ಪಕ್ಷಗಳಿಗೆ ನಿರ್ಬಂಧ ಹೇರಿದ್ದು, ಇದರಲ್ಲಿ ಎಐಎಂಐಎಂ ಪಕ್ಷ ಕೂಡ ಒಂದಾಗಿದೆ ಎಂದು ತಿಳಿದುಬಂದಿದೆ.

ಎಐಎಂಐಎಂ ಪಕ್ಷದ ಮೇಲಿನ ನಿರ್ಬಂಧ ಕುರಿತಂತೆ ಮಾತನಾಡಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತೆ ಜೆ.ಎಶ್ ಸಹರಿಯಾ ಅವರು, ಆಯೋಗದಲ್ಲಿ ನಿಯಮಾನುಸಾರವಾಗಿ ಈ ವರೆಗೂ 359 ರಾಜಕೀಯ ಪಕ್ಷಗಳನ್ನು ನೋಂದಾವಣಿ ಮಾಡಿಕೊಳ್ಳಲಾಗಿದೆ. ಇದರಲ್ಲಿ 17 ಪಕ್ಷಗಳು ಗುರ್ತಿಸಿಕೊಂಡಿರುವ ಪಕ್ಷಗಳೇ ಆಗಿವೆ. ಕೆಲ ಪಕ್ಷಗಳು ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದು ಹೇಳಿದ್ದಾರೆ.

ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಈ ಹಿಂದೆಯೇ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅಂತಿಮ ದಿನದಂದು ಕೂಡ ದಾಖಲೆಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಅಂತಿಮ ದಿನಾಂಕವನ್ನು ಕೂಡ ಮುಂದೂಡಿ ಅವಕಾಶಗಳನ್ನು ನೀಡಲಾಗಿತ್ತು. ಇಷ್ಟಾದರೂ ಪಕ್ಷಗಳು ದಾಖಲೆಗಳನ್ನು ನೀಡಿರಲಿಲ್ಲ. ಹೀಗಾಗಿ ಎಐಎಂಐಎಂ ಪಕ್ಷ ಸೇರಿ ಇನ್ನಿತರೆ ಪಕ್ಷಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT