ನವದೆಹಲಿ: ಭಯೋತ್ಪಾದನೆಗೆ ಉತ್ತೇಜನ ನೀಡುವ ರೀತಿಯಲ್ಲಿ ಭಾಷಣ ಮಾಡಿರುವ ಆರೋಪ ಎದುರಿಸುತ್ತಿರುವ ವಿವಾದಾತ್ಮಕ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಮೂಲಭೂತವಾದಿ ಸಂಘಟನೆಗಳಿಂದ ಹಣ ಸಂದಾಯವಾಗುತ್ತಿದೆಯೇ ಎಂಬ ಬಗ್ಗೆ ಭಾರತ ಸರ್ಕಾರ ತನಿಖೆ ಪ್ರಾರಂಭಿಸಿದೆ.
ಜಾಕಿರ್ ನಾಯಕ್ ನ ಎನ್ ಜಿಒ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ಗೆ ವಿದೇಶಗಳಿಂದ ಬಂದಿರುವ ದೇಣಿಗೆ ಕುರಿತ ಕಡತಗಳನ್ನು ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸುತ್ತಿದ್ದು ಕಳೆದ 4-5 ವರ್ಷಗಳಲ್ಲಿ ಐಆರ್ ಎಫ್ ಸುಮಾರು 15 ಕೋಟಿ ರೂ ಗಳಷ್ಟು ಹಣ ಪಡೆದಿದೆ ಎಂದು ಆಂಗ್ಲ ಮಾಧ್ಯಮವೊಂದರ ವರದಿ ಮೂಲಕ ತಿಳಿದುಬಂದಿದೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿಯಲ್ಲಿ ಜಾಕಿರ್ ನಾಯಕ್ ನ ಎನ್ ಜಿಒ ನೋಂದಣಿಯಾಗಿದೆ. ಐ ಆರ್ ಎಫ್ ಗೆ ದೇಣಿಗೆ ನೀಡುತ್ತಿರುವ ವ್ಯಕ್ತಿಗಳ ವಿವರಗಳನ್ನು ಹಾಗೂ ದೇಣಿಗೆಯನ್ನು ದುರುದ್ದೇಶಕ್ಕಾಗಿ ಬಳಕೆ ಮಾಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಗೃಹ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.