ದೇಶ

ಸುಡಾನ್ ನಲ್ಲಿರುವ ಭಾರತೀಯರ ರಕ್ಷಣೆಗೆ 'ಸಂಕಟ ಮೋಚನ್' ಕಾರ್ಯಾಚರಣೆಗೆ ಕೇಂದ್ರ ಸಿದ್ಧತೆ

Manjula VN

ನವದೆಹಲಿ: ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್'ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ 'ಸಂಕಟ್ ಮೋಚನ್' ಕಾರ್ಯಾಚರಣೆ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಸುಡಾನ್ ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವ ಭಾರತೀಯ ರಕ್ಷಣೆಗೆ 'ಸಂಕಟ್ ಮೋಚನ್' ಕಾರ್ಯಾಚರಣೆಯನ್ನು ಗುರುವಾರ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು, ವಿದೇಶಾಂಗ ರಾಜ್ಯ ಸಚಿವ ವಿ.ಕೆ.ಸಿಂಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ದಕ್ಷಿಣ ಸುಡಾನ್ ನಲ್ಲಿ ಸಿಲುಕಿರುವ ಭಾರತೀಯ ರಕ್ಷಣೆಗಾಗಿ 'ಸಂಕಟ್ ಮೋಚನ್' ನ್ನು ಬಿಡುಗಡೆ ಮಾಡುತ್ತಿದ್ದೇವೆ. ನನ್ನ ಸಹೋದ್ಯೋಗಿ ವಿಕೆ. ಸಿಂಗ್ ಅವರು ಕಾರ್ಯಾಚರಣೆಯ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ವಿಕೆ. ಸಿಂಗ್ ಅವರಿಗೆ ಕಾರ್ಯದರ್ಶಿ ಅಮರ್ ಸಿನ್ಹಾ, ಜೆಎಸ್. ಸತ್ಬೀರ್ ಸಿಂಗ್ ಮತ್ತು ನಿರ್ದೇಶಕ ಅಂಜಾನಿ ಕುಮಾರ್ ಅವರು ಸಾಥ್ ನೀಡಲಿದ್ದಾರೆ. ದಕ್ಷಿಣ ಸುಡಾನ್ ನಲ್ಲಿರುವ ಭಾರತೀಯ ರಾಯಭಾರಿ ಶ್ರೀಕುಮಾರ್ ಮೆನನ್ ಮತ್ತು ಅವರ ತಂಡ ಕೂಡ ಕಾರ್ಯಾಚರಣೆಗೆ ಕೈಜೋಡಿಸಲಿದೆ ಎಂದು ಸರಣಿ ಟ್ವೀಟ್ ನಲ್ಲಿ ಸುಷ್ಮಾ ಅವರು ಹೇಳಿಕೊಂಡಿದ್ದಾರೆ.  

ಅಲ್ಲದೆ, ಕಾರ್ಯಾಚರಣೆಗೆ ಬೆಂಬಲ ನೀಡುತ್ತಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಧನ್ಯವಾದ ಹೇಳಿರುವ ಅವರು, ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುವ ಭಾರತೀಯ ಸೇನಾ ಪಡೆಗೆ ಶುಭ ಹಾರೈಸಿದ್ದಾರೆ.

SCROLL FOR NEXT