ನವದೆಹಲಿ: ಆಸ್ತಿ ವಿವರಗಳನ್ನು ಬಹಿರಂಗ ಪಡಿಸುವಂತೆ ಸುಪ್ರೀಂ ಆದೇಶ ನೀಡಿದ್ದರೂ, ನ್ಯಾಯಾಲಯದ ಆದೇಶವನ್ನು ತಿರಸ್ಕರಿಸುತ್ತಿರುವ ಸಾಲದ ದೊರೆ ವಿಜಯ್ ಮಲ್ಯ ವಿರುದ್ಧ ಬ್ಯಾಂಕುಗಳು ಮತ್ತೆ ಅರ್ಜಿಯೊಂದನ್ನು ಗುರುವಾರ ಸಲ್ಲಿಸಿದೆ.
ಸಾಲದ ಹೊರೆ ಹೊತ್ತಿರುವ ವಿಜಯ್ ಮಲ್ಯ, ಪತ್ನಿ ಹಾಗೂ ಮಕ್ಕಳು ಹೊಂದಿರುವ ಎಲ್ಲಾ ಆಸ್ತಿಯ ವಿವರವನ್ನು ಬಹಿರಂಗ ಪಡಿಸುವಂತೆ ಸುಪ್ರೀಂ ಈ ಹಿಂದೆ ಸೂಚನೆ ನೀಡಿತ್ತು. ಸುಪ್ರೀಂ ಸೂಚನೆ ನೀಡಿ ಹಲವು ತಿಂಗಳುಗಳು ಕಳೆದರೂ ಈ ವರೆಗೂ ಮಲ್ಯ ಅವರು ತಮ್ಮ ಆಸ್ತಿ ವಿವರವನ್ನು ಬಹಿರಂಗ ಪಡಿಸಿಲ್ಲ.
ಮಲ್ಯ ಅವರು ಸುಪ್ರೀಂಕೋರ್ಟ್ ಸೂಚನೆಯನ್ನು ತಿರಸ್ಕರಿಸುತ್ತಿದ್ದು, ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಬ್ಯಾಂಕುಗಳು ಸುಪ್ರೀಂನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ ಎಂದು ತಿಳಿದುಬಂದಿದೆ. ಇನ್ನು ಈ ಅರ್ಜಿಯನ್ನು ಪರಿಶೀಲಿಸಿರುವ ಸುಪ್ರೀಂ ಜುಲೈ.18 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
17 ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ರುಪಾಯಿ ಸಾಲ ಪಡೆದಿರುವ ವಿಜಯ್ ಮಲ್ಯ ಈಗ ಲಂಡನ್ ನಲ್ಲಿ ನೆಲೆಸಿದ್ದಾರೆ. ಸಾಲಮರುಪಾವತಿ ಬಗ್ಗೆ ಹಲವು ಬಾರಿ ನೊಟೀಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ಕೂಡ ರದ್ದು ಮಾಡಲಾಗಿದೆ.