ಕೊಲೆಯಾದ ಉದ್ಯಮಿ ದತ್ತ ಫುಗೆ(ಸಂಗ್ರಹ)
ಪುಣೆ: ಚಿನ್ನದ ಶರ್ಟ್ ಖರೀದಿಸಿ ಸುದ್ದಿಯಾಗಿದ್ದ 48 ವರ್ಷದ ಉದ್ಯಮಿಯನ್ನು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಂದಿರುವ ಘಟನೆ ನಡೆದಿದೆ.
ಪುಣೆಯ ಪಿಂಪ್ರಿ ಚಿಂಚ್ ವಾಡಾದ ಕೈಗಾರಿಕಾ ಟೌನ್ ಶಿಪ್ ನ ಉದ್ಯಮಿ ದತ್ತ ಫುಗೆ 2012ರಲ್ಲಿ 3.5 ಕೆ.ಜಿ ತೂಕದ 1.27 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಶರ್ಟ್ ನ್ನು ಖರೀದಿಸಿ ಸುದ್ದಿಯಾಗಿದ್ದರು.
ಅವರನ್ನು ನಿನ್ನೆ ರಾತ್ರಿ 11.30ರ ಸುಮಾರಿಗೆ ದಿಗಿ ಪ್ರದೇಶದ ಮೈದಾನವೊಂದರಲ್ಲಿ ಸುಮಾರು 12 ಮಂದಿ ದುಷ್ಕರ್ಮಿಗಳು ದಾಳಿ ನಡೆಸಿ ಕಲ್ಲಿನಿಂದ ಜಜ್ಜಿ, ಕತ್ತಿಯಿಂದ ಇರಿದು ಕೊಂದು ಹಾಕಿದ್ದಾರೆ.
ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ಪ್ರಕಾರ, ದುಷ್ಕರ್ಮಿಗಳು ಫುಗೆಯನ್ನು ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆಂದು ಮೈದಾನಕ್ಕೆ ಕರೆದಿದ್ದರು. ಅಲ್ಲಿ ವಾಗ್ವಾದ ನಡೆದಿದೆ. ಆಗ ಕಲ್ಲು ಎತ್ತಿ ಹಾಕಿ ಕೊಂದಿದ್ದಾರೆ. ಅಲ್ಲಿಗೆ ಹೇಗೆ ಹೋದರು, ಯಾರಾದರೂ ಜೊತೆಗಿದ್ದರೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದು ಹುಟ್ಟುಹಬ್ಬ ಕಾರ್ಯಕ್ರಮ ಮುಗಿಸಿ ಫುಗೆಯವರ 22 ವರ್ಷದ ಪುತ್ರ ಅಲ್ಲಿಗೆ ಬಂದಾಗಲೇ ತನ್ನ ತಂದೆ ಸಾವಿಗೀಡಾಗಿದ್ದು ಗೊತ್ತಾದದ್ದು.
ದತ್ತ ಫುಗೆ ಪಿಂಪ್ರಿ-ಚಿಂಚಿವಾಡ ನಗರಪಾಲಿಕೆಯ ಮಾಜಿ ಕಾರ್ಪೊರೇಟರ್ ಪತಿಯಾಗಿದ್ದು, ಬಡ್ಡಿ ವ್ಯವಹಾರ ಮತ್ತು ಚಿಟ್ ಫಂಡ್ ವ್ಯಾಪಾರ ನಡೆಸುತ್ತಿದ್ದರು. ಹಣದ ವ್ಯವಹಾರದಲ್ಲಿನ ಭಿನ್ನಾಭಿಪ್ರಾಯ ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
2012ರಲ್ಲಿ ದತ್ತ ಫುಗೆ ಹೊಳೆಯುವ ಚಿನ್ನದ ಶರ್ಟನ್ನು ಖರೀದಿಸಿ ದೇಶಾದ್ಯಂತ ಸುದ್ದಿಯಾಗಿದ್ದರು. ಶರ್ಟ್ ತಯಾರಿಸಲು 15 ಅಕ್ಕಸಾಲಿಗರು ಪಶ್ಚಿಮ ಬಂಗಾಳದಿಂದ ಬಂದು ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡಿ 2 ವಾರಗಳಲ್ಲಿ ತಯಾರು ಮಾಡಿಕೊಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics