ದೇಶ

ಅರುಣಾಚಲಪ್ರದೇಶ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣವಚನ

Vishwanath S
ಇಟಾನಗರ: ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಪೆಮಾ ಖಂಡು ಅರುಣಾಚಲಪ್ರದೇಶ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ತಥಾಗತ ರಾಯ್‌ ಅವರು ಪೆಮಾ ಖಂಡು ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪೆಮಾ ಖಂಡು ಅವರು ಅರುಣಾಚಲ ಪ್ರದೇಶದ ಇತಿಹಾಸದಲ್ಲೇ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂದು ದಾಖಲೆ ಬರೆದಿದ್ದಾರೆ. 37 ವರ್ಷದ ಪೆಮಾ ಖಂಡು ಅವರು ಅರುಣಾಚಲಪ್ರದೇಶ ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು ಅವರ ಹಿರಿಯ ಪುತ್ರ. 
ಪೆಮಾ ಖಂಡು ಮುಕ್ತೋ ಮೀಸಲು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2005ರಿಂದ ರಾಜ್ಯ ಕಾಂಗ್ರೆಸ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕಲಿಕೋ ಫುಲ್ ಸರ್ಕಾರದಲ್ಲಿ ಡಿಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. 
ಬಂಡಾಯವೆದ್ದು ಕಾಂಗ್ರೆಸ್ ನಿಂದ ದೂರವಾಗಿ ಹೊಸ ಸರ್ಕಾರ ರಚಿಸಿಕೊಂಡಿದ್ದ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷ ಅರುಣಾಚಲಪ್ರದೇಶದಲ್ಲಿ ಸರ್ಕಾರವನ್ನು ಉಳಿಸಿಕೊಂಡಿದೆ. ಮುಖ್ಯಮಂತ್ರಿ ನಬಮ್ ತುಕಿ ಅವರಿಗೆ ಕೊಕ್ ನೀಡಲಾಗಿದ್ದು, ಪೆಮಾ ಖಂಡು ಅವರನ್ನು ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗಿತ್ತು. ಖಂಡು ಅವರಿಗೆ ಇಬ್ಬರು ಪಕ್ಷೇತರರು ಸೇರಿ 47 ಶಾಸಕರು ಬೆಂಬಲ ಸೂಚಿಸಿದ್ದರು. 
SCROLL FOR NEXT