ಸಂಸತ್ತಿನ ಮುಂಗಾರು ಅಧಿವೇಶನ ಕಲಾಪಕ್ಕೆ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪ ಸೋಮವಾರ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ನಿಧನರಾದ ಮಧ್ಯ ಪ್ರದೇಶದ ಸಂಸದ ದಲ್ಪತ್ ಸಿಂಗ್ ಪರಸ್ತೆ ಮತ್ತು ಆರು ಜನ ಮಾಜಿ ಸಂಸದರಿಗೆ ಗೌರವ ನಮನ ಸಲ್ಲಿಸಲಾಯಿತು. ನಂತರ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಿದರು.
ಇದಕ್ಕೂ ಮುನ್ನ ಪ್ರಧಾನ ಮಂತ್ರಿ ತಮ್ಮ ಸಂಪುಟಕ್ಕೆ ಸೇರ್ಪಡೆಗೊಂಡ ನೂತನ ಸಚಿವರನ್ನು ಸದನದ ಸದಸ್ಯರಿಗೆ ಪರಿಚಯ ಮಾಡಿಕೊಟ್ಟರು. ಆಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಕಲಾಪಗಳಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಗಳ, ಕಿತ್ತಾಟ ನಡೆಯುತ್ತವೆ. ಆಡಳಿತ ಪಕ್ಷವನ್ನು ಹೇಗೆ ಬಗ್ಗುಬಡಿಯಬೇಕೆಂದು ವಿರೋಧ ಪಕ್ಷಗಳು ಹೊಂಚು ಹಾಕುತ್ತಿರುತ್ತವೆ. ಆದರೆ ಇಂದು ಲೋಕಸಭೆಯಲ್ಲಿ ಅಧಿವೇಶ ಆರಂಭವಾಗುವ ಮುನ್ನ ಸ್ನೇಹದ ವಾತಾವರಣ ಕಂಡುಬಂತು. ಸದನದ ಒಳಗೆ ಹೋಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮೀಪ ಹೋಗಿ ಮಾತುಕತೆ ನಡೆಸಿದರು. ಅಲ್ಲದೆ ಇತರ ಪ್ರತಿಪಕ್ಷಗಳ ಮುಖಂಡರಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮೊದಲಾದವರನ್ನು ಭೇಟಿ ಮಾಡಿದರು.ಪ್ರಧಾನಿಯವರಿಗೆ ಹಿರಿಯ ಸಚಿವೆ ಸುಷ್ಮಾ ಸ್ವರಾಜ್ ಸಾಥ್ ನೀಡಿದರು.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಸಂಸತ್ತು ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಅಧಿವೇಶನದ ವೇಳೆ ಸಂಸತ್ತಿನ ಎರಡೂ ಸದನಗಳಲ್ಲಿ ದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ರಚನಾತ್ಮಕ ಚರ್ಚೆ ನಡೆಸುವಂತೆ ಎಲ್ಲಾ ಪಕ್ಷಗಳಲ್ಲಿ ಮನವಿ ಮಾಡಿಕೊಂಡರು. ಕಳೆದ ಕೆಲ ದಿನಗಳಿಂದ ಅನೇಕ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದು ಚರ್ಚೆಯಲ್ಲಿ ಪಾಲ್ಗೊಳ್ಳಲು ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಹೊಸದಾಗಿ ಆಯ್ಕೆಗೊಂಡ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ನಂತರ ಗುಜರಾತ್ ನಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಬಿಎಸ್ ಪಿ ನಾಯಕರು ಗದ್ದಲವೆಬ್ಬಿಸಿದ್ದರಿಂದ ಕಲಾಪವನ್ನು ಅಪರಾಹ್ನಕ್ಕೆ ಮುಂದೂಡಲಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos