ನವದೆಹಲಿ: ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಕ್ಸಲರ ಹುಟ್ಟಡಗಿಸಲು ಬಿಹಾರ ಸರ್ಕಾರಕ್ಕೆ ಅಗತ್ಯ ನೆರವು ನೀಡಲು ಕೇಂದ್ರ ಸಿದ್ಧವಿದೆ ಎಂದು ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಭರವಸೆ ನೀಡಿದ್ದಾರೆ.
ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡು 10 ಸಿಆರ್ ಪಿಎಫ್ ಕಮಾಂಡೋಗಳು ಹುತಾತ್ಮರಾಗಿದ್ದರು. ಅಲ್ಲದೆ, ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ಕುರಿತಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿದೊಂದಿಗೆ ದೂರವಾಣಿ ಮುಖಾಂತರ ಮಾತುಕತೆ ನಡೆಸಿರುವ ರಾಜನಾಥ್ ಸಿಂಗ್ ಅವರು, ವರದಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ನಕ್ಸಲರ ಹುಟ್ಟಡಗಿಸಲು ಬಿಹಾರ ಸರ್ಕಾರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸಿದ್ಧರಿದ್ದೇವೆಂದು ಹೇಳಿದ್ದಾರೆ.
ಮಾತುಕತೆ ವೇಳೆ ನಿತೀಶ್ ಕುಮಾರ್ ಅವರು ಕೂಡ ಗೃಹ ಸಚಿವರಿಗೆ ಪರಿಸ್ಥಿತಿಯ ಕುರಿತಂತೆ ವಿವರಣೆ ನೀಡಿದ್ದು, ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ವಿವರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಇದೇ ವೇಳೆ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿರುವ ರಾಜನಾಥ ಸಿಂಗ್ ಅವರು, ಗಾಯಗೊಂಡಿರುವ ಯೋಧರು ಶೀಘ್ರಗತಿಯಲ್ಲಿ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಇದರಂತೆ ಗಯಾ-ಔರಂಗಾಬಾದ್ ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ಸಿಆರ್ ಪಿಎಫ್ ಡೈರೆಕ್ಟರ್ ಜನರಲ್ ಕೆ.ದುರ್ಗಾ ಪ್ರಸಾದ್ ಅವರಿಗೆ ರಾಜನಾಥ್ ಸಿಂಗ್ ಅವರು ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.