ನವದೆಹಲಿ: ಬಿಜೆಪಿ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧು ಅವರು ನಿನ್ನೆ ರಾಜ್ಯಸಭೆ ಸದಸ್ಯತ್ವಕ್ಕೆ ದಿಢೀರ್ ರಾಜಿನಾಮೆ ನೀಡಿ ಅಚ್ಚರಿ ಮೂಡಿಸಿದ್ದು, ಇದೀಗ ಸಿದ್ಧು ಪತ್ನಿ ನವಜೋತ್ ಕೌರ್ ಸಿದ್ಧು ಕೂಡ ಪತಿಯ ಹಾದಿಯನ್ನೇ ತುಳಿಯುತ್ತಾರಾ ಎಂಬ ಗುಮಾನಿಗಳು ಕೇಳಿಬಂದಿವೆ.
ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ನವಜೋತ್ ಸಿಂಗ್ ಸಿದ್ಧು ಅವರ ಪತ್ನಿ ನವಜೋತ್ ಕೌರ್ ನಾನು ಬಿಜೆಪಿಗೆ ರಾಜಿನಾಮೆ ನೀಡಿಲ್ಲ ಎಂದು ಹೇಳಿದ್ದಾರೆ.
ಪಂಜಾಬ್ ನ ಬಿಜೆಪಿ ಶಾಸಕಿಯಾಗಿರುವ ಕೌರ್ ಆ ರಾಜ್ಯದ ಸಂಸದೀಯ ಕಾರ್ಯದರ್ಶಿ ಸ್ಥಾನ ತೊರೆಯಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದೀಗ ಪ್ರತಿಕ್ರಿಯಿಸಿರುವ ಕೌರ್ ನಾನು ಬಿಜೆಪಿ ತೊರೆದಿಲ್ಲ, ರಾಜಿನಾಮೆ ನೀಡಿಲ್ಲ ಎಂದು ಸ್ಫಪ್ಟಪಡಿಸಿದ್ದಾರೆ.
ಪತಿ ರಾಜಿನಾಮೆ ಕುರಿತಂತೆ ಮಾತನಾಡಿದ ಕೌರ್, ಸಿದ್ಧು ಪಂಜಾಬ್ ನ ಹಿತಾಸಕ್ತಿಗಾಗಿ ರಾಜಿನಾಮೆ ನೀಡಿರುವುದಾಗಿ ಬರೆದಿದ್ದಾರೆ. ಅವರಿಗೆ ಪಂಜಾಬ್ ರಾಜ್ಯಕ್ಕಾಗಿ ದುಡಿಯುವ ಇರಾದೆ ಇದೆ ಹೀಗಾಗಿ ಅವರು ಬೇರೆಯದ್ದೇ ದಾರಿ ಕಂಡುಕೊಂಡಿದ್ದಾರೆ ಎಂದರು.
ಸಿದ್ಧು ರಾಜಿನಾಮೆ ಬಳಿಕ ಆಮ್ ಆದ್ಮಿ ಪಾರ್ಟಿ ಸಂಸ್ಧಾಪಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಪಂಜಾಬ್ ರಾಜ್ಯವನ್ನು ರಕ್ಷಿಸಲು ರಾಜ್ಯಸಭೆ ಸದಸ್ಯತ್ವವನ್ನೇ ತೊರೆದಿದ್ದಾರೆ. ಅವರ ಧೈರ್ಯಶಾಲಿ ನಿರ್ಧಾರಕ್ಕೊಂದು ನನ್ನ ಸೆಲ್ಯೂಟ್ ಎಂದು ಪ್ರಶಂಸಿಸಿದ್ದರು. ಈ ಮಧ್ಯೆ ಸಿದ್ಧು ಆಪ್ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.