ನವದೆಹಲಿ: ಸ್ವಪಕ್ಷೀಯರ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯ ನರೇಲಾ ಪ್ರದೇಶದಲ್ಲಿ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆಕೆಯನ್ನು ದೆಹಲಿಯ ಎಲ್ ಎನ್ ಜಿಪಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಈ ಹಿಂದೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ರಮೇಶ್ ವಾದ್ವಾ ಎಂಬ ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರಿಂದ ತೀವ್ರ ಮನನೊಂದು ಆಕೆ ಆತ್ಮಹತ್ಯೆ ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ.
ಕುಟುಂಬದ ಮೂಲಗಳ ಪ್ರಕಾರ ಈ ಹಿಂದೆ ರಮೇಶ್ ವಾದ್ವಾ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಕಿರುಕುಳ ತಾಳಲಾರದೇ ಮಹಿಳೆ ತಿಂಗಳ ಹಿಂದಷ್ಟೇ ಆರೋಪಿ ರಮೇಶ್ ವಾದ್ವಾ ವಿರುದ್ಧ ದೂರು ನೀಡಿದ್ದರು. ದೂರು ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಆಮ್ ಆದ್ಮಿ ಪಕ್ಷದ ಸ್ಥಳೀಯ ಹಿರಿಯ ಮುಖಂಡರು ರಮೇಶ್ ವಾದ್ವಾಗೆ ಜಾಮೀನು ನೀಡಿದ್ದರಿಂದ ತೀವ್ರ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಪ್ರಕರಣಕ್ಕೆ ಇದೀಗ ರಾಜಕೀಯ ಬಣ್ಣ ಬಳಿಯಲಾಗುತ್ತಿದ್ದು, ಘಟನೆಯನ್ನು ಖಂಡಿಸಿರುವ ಬಿಜೆಪಿ ಮುಖಂಡರು ಸ್ಥಳೀಯ ಆಪ್ ಮುಖಂಡರ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ ಮಹಿಳೆ ಸಾವಿಗೆ ಪಕ್ಷವೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಆರೋಪವನ್ನು ಆಪ್ ಪಕ್ಷ ತಿರಸ್ಕರಿಸಿದ್ದು, ಆರೋಪಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಪಕ್ಷದ ವಕ್ತಾರ ದೀಪಕ್ ಬಾಜಪೇಯಿ ಹೇಳಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.