ಅಹಮದಾಬಾದ್: ಗುಜರಾತ್ ನಲ್ಲಿ ಗೋ ರಕ್ಷಾ ಸಮಿತಿಯಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ದಲಿತ ಸಂತ್ರಸ್ತರನ್ನು ಭೇಟಿ ಮಾಡಲು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ನ ರಾಜ್ ಕೋಟ್ ಗೆ ಭೇಟಿ ನೀಡಿದ್ದರು. ಈ ವೇಳೆ ವಿಚಿತ್ರ ಘಟನೆಯೊಂದು ನಡೆದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಹಲ್ಲೆಗೊಳಗಾದ ಸಂತ್ರಸ್ತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೂ ರಾಹುಲ್ ಗಾಂಧಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ.
ಹಲ್ಲೆಗೊಳಗಾಗಿದ್ದ ದಲಿತ ರಮೇಶ್ ಸರ್ವೀಯ ಎಂಬ ಸಂತ್ರಸ್ತ ಜುನಾಗಢದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜು.18 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ. ಆದರೆ ರಾಜಕೀಯ ಒತ್ತಡದಿಂದ, ರಾಹುಲ್ ಗಾಂಧಿ ಸಂತ್ರಸ್ತರನ್ನು ಭೇಟಿ ಮಾಡಲು ಬರುತ್ತಾರೆ ಎಂಬ ಒಂದೇ ಕಾರಣಕ್ಕೆ ಆತನ ಆರೋಗ್ಯ ಸರಿ ಹೋಗಿದ್ದರು ಸಹ ಮತ್ತೊಮ್ಮೆ ಪಂಡಿತ್ ದಿನ್ ದಯಾಳ್ ಉಪಾಧ್ಯಾಯ(ಪಿಡಿಯು) ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಜು.11 ರಂದು ಗೋ ರಕ್ಷಾ ಸಮಿತಿಯಿಂದ ಹಲ್ಲೆಗೊಳಗಾದ ನಂತರ ರಮೇಶ್ ಸರ್ವಿಯ ಆತನ ತಂದೆ ಬಾಲು ಸರ್ವಿಯರೊಂದಿಗೆ ಜುನಾಗಢದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜು.18 ರಂದು ಬಿಡುಗಡೆಯಾಗಿದ್ದ. ಇದೆ ವ್ಯಕ್ತಿ ಮತ್ತೊಮ್ಮೆ ಅಂದರೆ ಜು.21 ರಂದು ರಾಹುಲ್ ಗಾಂಧಿ ಭೇಟಿ ನೀಡಿದ ಅವಧಿಯಲ್ಲಿ ಪಿಡಿಯು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಮೇಶ್ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮತ್ತೆ ನನಗೆ ನೋವು ಕಾಣಿಸಿಕೊಂಡಿದ್ದರಿಂದ ಪಿಡಿಯು ಆಸ್ಪತ್ರೆಗೆ ದಾಖಲಾಗಿದ್ದೇನೆ, ಇದರಲ್ಲಿ ರಾಜಕೀಯ ಒತ್ತಡ ಇಲ್ಲ ಎಂದು ಹೇಳಿದ್ದಾರೆ.