ನವದೆಹಲಿ: ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಮಾಜಿ ಆಪ್ತ ವಿಶ್ವಂಭರ್ ಶ್ರೀವಾಸ್ತವ ಅವರು ಬರೆದಿರುವ ಅಡ್ವಾಣಿ ಅವರೊಂದಿಗೆ 32 ವರ್ಷಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಎಲ್ ಕೆ ಅಡ್ವಾಣಿ ಗೈರು ಹಾಜರಾಗಿದ್ದಾರೆ.
ತಮ್ಮದೇ ಬಗ್ಗೆ ಬರೆದ ಪುಸ್ತಕದಿಂದ ಅಂತರ ಕಾಯ್ದುಕೊಂಡಿದ್ದ ಅಡ್ವಾಣಿ, ಈ ಪುಸ್ತಕವನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ, ಒಪ್ಪಿಗೆ ಇಲ್ಲದೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಡ್ವಾಣಿ ತಮ್ಮ ಕಾರ್ಯದರ್ಶಿ ದೀಪಕ್ ಚೋಪ್ರಾ ಮೂಲಕ ಹೇಳಿಕೆ ನೀಡಿದ್ದರು. ಆದರೂ ಸಹ ಅಡ್ವಾಣಿ ಕುರಿತಾದ ಪುಸ್ತಕವನ್ನು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಆರ್ ಎಸ್ ಎಸ್ ನ ಹಿರಿಯ ನಾಯಕ ಕೆಎನ್ ಗೋವಿಂದಾಚಾರ್ಯ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ.
ಅಡ್ವಾಣಿ ಬಗ್ಗೆ ಬರೆಯಲಾಗಿರುವ ಪುಸ್ತಕದಲ್ಲಿ ಬಿಜೆಪಿಯ ಭೀಷ್ಮನ ಕುರಿತಾದ ಹಲವು ಕುತೂಹಲಕಾರಿ ಮಾಹಿತಿಗಳಿದ್ದು, ಮೊದಲ ಹಸ್ತಪ್ರತಿಯನ್ನು ಪರಿಶೀಲಿಸಿದ್ದ ಅಡ್ವಾಣಿ ಪುಸ್ತಕ ಬಿಡುಗಡೆಗೆ ಒಪ್ಪಿದ್ದರು, ಆದರೆ ಏಕಾಏಕಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂಬ ಹೇಳಿಕೆ ಏಕೇ ನೀಡಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ವಿಶ್ವಂಭರ್ ಶ್ರೀವಾಸ್ತವ ಹೇಳಿದ್ದಾರೆ. 2013 ರಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾದ ಸಂಸದೀಯ ಮಂಡಳಿ ಸಭೆಯಲ್ಲಿ ಭಾಗವಹಿಸಲು ಅಡ್ವಾಣಿ ಸಿದ್ಧರಿದ್ದರು. ಆದರೆ ಮನೆಯಲ್ಲಿ ಕೆಲವರಿಂದ ತಡೆಯಲ್ಪಟ್ಟರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.