ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಕೊಡಮಾಡಿದ ದೇವಿ ಪ್ರಶಸ್ತಿ ಸಾಧಕಿಯರೊಂದಿಗೆ ಕೇರಳ ಮುಖ್ಯಮಂತ್ರಿ ಪಿನರಯಿ ವಿಜಯನ್ ಮತ್ತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದ
ಕೊಚ್ಚಿ: ಮಹಿಳಾ ಸಾಧಕಿಯರಿಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ನೀಡುವ ದೇವಿ ಪ್ರಶಸ್ತಿಯನ್ನು ಈ ಬಾರಿ ಕೊಚ್ಚಿಯಲ್ಲಿ ನಿನ್ನೆ(ಶನಿವಾರ) ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಕೇರಳ ಮುಖ್ಯಮಂತ್ರಿ ಪಿನರಯಿ ವಿಜಯನ್ ದೇವಿ ಪ್ರಶಸ್ತಿ ಪ್ರದಾನ ಮಾಡಿದರು. ಆದ್ರ ಚಂದ್ರಮೌಳಿ, ಕರಿವೆಪ್ಪಿಲ್ ರಬಿಯಾ, ಆಶಾ ಜೊಮಿಸ್, ಎಲಿಜಬೆತ್ ಸುಸಾನ್ ಕೊಶಿ, ಗಾಯತ್ರಿ ತಂಕಚಿ, ಕ್ಯಾಪ್ಟನ್ ರಾಧಿಕಾ ಮೆನನ್, ಸಾಜಿತಾ ಮದತಿಲ್, ಡಾ.ಶೆರ್ಲಿ ವಾಸು, ಟಿ.ವಿ.ಅನುಪಮಾ ಮತ್ತು ವೈಕ್ಕೊಮ್ ವಿಜಯಲಕ್ಷ್ಮಿ ಈ ವರ್ಷದ ದೇವಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದ ಮುಖ್ಯಮಂತ್ರಿ, ಇದು ಮಹಿಳೆಯರು ಎದುರಿಸುವ ಹಲವು ಸವಾಲುಗಳನ್ನು ವಿಸ್ತಾರವಾಗಿ ಚರ್ಚಿಸುವ ಸಮಯ. ಇಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸುತ್ತದೆ.ಪುರುಷ ಕೇಂದ್ರಿತ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಮಹಿಳೆಯರ ವಿರುದ್ಧವಾದ ಮನೋಭಾವನೆ ಜನರಲ್ಲಿರುತ್ತದೆ. ಕೇವಲ ಮನುಸ್ಮೃತಿಯಲ್ಲಿ ಮಾತ್ರ ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂದು ಹೇಳಿದ್ದಲ್ಲ, ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸುವ ಕಾರ್ಯ ನಮ್ಮ ಸಮಾಜದಲ್ಲಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಮಹಿಳೆಯರು ಕೂಡ ಪುರುಷರಂತೆ ಸಮಾನ ಹಕ್ಕುಗಳನ್ನು ಪಡೆಯುತ್ತಿದ್ದಾರೆ. ಆದರೆ ಅದರ ಹಿಂದೆ ಅನೇಕ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುತ್ತವೆ ಎಂದರು.
ಮಹಿಳೆಯರು ತಮಗಿಷ್ಟ ಬಂದ ಉಡುಪುಗಳನ್ನು ಧರಿಸಬಾರದು ಎಂಬ ಗ್ರಹಿಕೆ ನಮ್ಮ ಸಮಾಜದ ಒಂದು ವರ್ಗದ ಜನರಲ್ಲಿದೆ. ಆ ಮನೋಭಾವ ಬದಲಾಗಬೇಕು. ಬಟ್ಟೆಗಳನ್ನು ಧರಿಸುವ ವಿಚಾರದಲ್ಲಿ ಪುರುಷರಿಗೆ ಸಮನಾದ ಹಕ್ಕು ಮಹಿಳೆಯರಿಗೂ ಇರುತ್ತದೆ. ಮಹಿಳೆಯರು ಧರಿಸುವ ಉಡುಪುಗಳನ್ನು ಟೀಕಿಸುವವರು, ಅವರು ಪ್ರಚೋದನಾತ್ಮಕ ಉಡುಪುಗಳನ್ನು ಧರಿಸುತ್ತಾರೆ ಎಂದು ಹೇಳುತ್ತಾರೆ. ಮಹಿಳೆಯರನ್ನು ಈ ರೀತಿ ಅವಮಾನಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿನರಯಿ ವಿಜಯನ್ ಎಚ್ಚರಿಕೆ ನೀಡಿದರು.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮುಖ್ಯಮಂತ್ರಿಗಳಿಗೆ ಸ್ಮರಣ ಕಾಣಿಕೆ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ಸಂಪಾದಕ ಶಂಪ ದಾರ್ ಕಾಮತ್ ವಂದಿಸಿ, ಕೇರಳ ಸ್ಥಳೀಯ ಸಂಪಾದಕ ವಿನೋದ್ ಮ್ಯಾಥ್ಯೂ ಸ್ವಾಗತಿಸಿದರು.
ಕೊಚ್ಚಿ ಮೇಯರ್ ಸೌಮಿನಿ ಜೈನ್, ಕೆ.ವಿ.ಥಾಮಸ್ ಎಂಪಿ, ಶಾಸಕ ಹಿಬಿ ಇಡನ್, ಜಿಲ್ಲಾಧಿಕಾರಿ ಎಂ.ಜಿ.ರಾಜಮಣಿಕ್ಕಮ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ. ರಾಜೀವ್ ಮತ್ತು ಮಾಜಿ ಮೇಯರ್ ಟೋನಿ ಚಮ್ಮನಿ ಹಾಗೂ ವಿವಿಧ ಕ್ಷೇತ್ರಗಳ ಇತರ ಗಣ್ಯರು ಹಾಜರಿದ್ದರು.