ಚಂಡೀಗಢ: ಕುರಾನ್ ಅಪವಿತ್ರಗೊಳಿಸಿದ ಆರೋಪದ ಮೇಲೆ ಭಾನವಾರ ಬಂಧನಕ್ಕೊಳಗಾಗಿದ್ದ ಆಪ್ ಶಾಸಕ ನರೇಶ್ ಯಾದವ್ ಅವರನ್ನು ಪಂಜಾಬ್ ಕೋರ್ಟ್ ಸೋಮವಾರ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಆದೇಶಿಸಿದೆ.
ಜೂನ್ 24ರಂದು ನಡೆದ ಕುರಾನ್ ದಹನ ಪ್ರಕರಣ ಸಂಬಂಧ ನಿನ್ನೆ ಸಂಜೆನರೇಶ್ ಯಾದವ್ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಇಂದು ಚಂಡೀಗಢದಿಂದ 100 ಕಿ.ಮೀ.ದೂರದಲ್ಲಿರುವ ಮುಸ್ಲಿಂ ಪ್ರಾಬಲ್ಯವಿರುವ ಮಾಲೇರ್ ಕೋಟ್ಲಾ ಕೋರ್ಟ್ ಗೆ ಹಾಜರುಪಡಿಸಿದರು.
ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆಯಲಾಗಿರುವ ಪ್ರಮುಖ ಆರೋಪಿ ವಿಜಯ್ ಕುಮಾರ್ ಎಂಬಾತ ವಿಚಾರಣೆ ವೇಳೆ ನರೇಶ್ ಯಾದವ್ ಅವರ ಅಣತಿಯಂತೆ ನಾನು ಕುರಾನ್ ನನ್ನು ಹರಿದಿ¨ªೆ ಎಂದು ಮಾಹಿತಿ ನೀಡಿರುವ ಕಾರಣ ಪೊಲೀಸರು ಆಪ್ ಶಾಸಕನ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಂಡಿದ್ದರು.
"ಈ ಕೃತ್ಯ ಎಸಗಲು ನನಗೆ 1 ಕೋಟಿ ರುಪಾಯಿ ಆಮಿಷ ಒಡ್ಡಲಾಗಿತ್ತು. ದೀನಾನಗರ್ ಮತ್ತು ಪಠಾಣ್‌ಕೋಟ್ ದಾಳಿಯ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಲಾಗಿದ್ದು, ನಾವು ಪಾಕಿಸ್ಥಾನ ಮತ್ತು ಮುಸ್ಲಿಂ ವಿರೋಧಿಗಳು' ಎಂದು ವಿಜಯ್ ಕುಮಾರ್ ಹೇಳಿಕೆ ನೀಡಿದ್ದ. ಬಳಿಕ ನ್ಯಾಯಾಲಯವು ಯಾದವ್ ವಿರುದ್ಧ ಬಂಧನದ ವಾರಂಟ್ ಜಾರಿ ಮಾಡಿತ್ತು.