ನವದೆಹಲಿ: ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ಮುಜಾಫರ್ ವನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವರ ಮೇಲೆ ಭಾರತೀಯ ಸೇನೆ ಪೆಲ್ಲೆಟ್ ಗನ್ ಪ್ರಯೋಗಿಸಿರುವುದನ್ನು ಖಂಡಿಸಿರುವ ಪಾಕಿಸ್ತಾನದ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ, ಅಮಿತಾಬ್ ಬಚ್ಚನ್ ಅವರ ಭಾವ ಚಿತ್ರವನ್ನು ಪೆಲ್ಲೆಟ್ ಗುಂಡಿನಿಂದ ಗಾಯಗೊಂಡಿರುವ ರೀತಿಯಲ್ಲಿ ಪ್ರಕಟಿಸಿದೆ.
ಭಾರತೀಯ ಸೇನೆ ಕಾಶ್ಮೀರದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಬಳಸುತ್ತಿರುವ ಪೆಲ್ಲೆಟ್ ಗನ್ ಹಾನಿಕಾರಕವಲ್ಲದ ಶಾಸ್ತ್ರವಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ರಬ್ಬರ್ ಪೆಲ್ಲೆಟ್ ಗಳು ತಾಗಿದರೆ ಆ ವ್ಯಕ್ತಿ ದೃಷ್ಟಿಯನ್ನು ಕಳೆದುಕೊಳ್ಳಬಹುದು ಎಂದು ವೈದ್ಯರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಸೇನೆ ಪೆಲ್ಲೆಟ್ ಗನ್ ಗಳನ್ನು ಬಳಸುವುದನ್ನು ವಿರೋಧಿಸಿರುವ ಪಾಕಿಸ್ತಾನದ ನೆವರ್ ಫರ್ಗೆಟ್ ಪಾಕಿಸ್ತಾನ್ ಎಂಬ ಗುಂಪು, ಈ ಬಗ್ಗೆ ಜನರ ಗಮನ ಸೆಳೆಯಲು ಆನ್ ಲೈನ್ ಅಭಿಯಾನವನ್ನು ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಪೆಲ್ಲೆಟ್ ಗನ್ ಗುಂಡೇಟಿನಿಂದ ಕಣ್ಣಿನ ದೃಷ್ಟಿ ಕಳೆದುಕೊಂಡವರಂತೆ, ಅಮಿತಾಬ್ ಬಚ್ಚನ್, ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ, ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರು ಪೆಲ್ಲೆಟ್ ಗನ್ ನಿಂದ ಗುಂಡೇಟಿಗೆ ಗುರಿಯಾದವರಂತೆ ಫೋಟೋ ಶಾಪ್ ಮಾಡಿರುವ ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದೆ.